ಮಂಡ್ಯ: ಕೌಟುಂಬಿಕ ಕಲಹದಿಂದ ಬೇಸತ್ತು ಮೂವರು ಮಕ್ಕಳಿಗೆ ವಿಷವುಣಿಸಿ ತಾಯಿಯೊಬ್ಬಳು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದ್ದೂರು ಪಟ್ಟಣದ ಹೊಳೆ ಬೀದಿಯಲ್ಲಿ ಘಟನೆ ನಡೆದಿದೆ.
ಹೊಳೆ ಬೀದಿಯ ನಿವಾಸಿ ಹಾಗೂ ಕಾರು ಮೆಕಾನಿಕಲ್ ಆಖಿಲ್ ಅವರ ಪತ್ನಿ ಉಸ್ನಾ ಕೌಸರ್ (30) ಆತ್ಮಹತ್ಯೆಗೆ ಶರಣಾದವರು. ಈಕೆ 7 ವರ್ಷದ ಪುತ್ರ ಹಾರಿಸ್, ಮಗಳು ಆಲಿಸಾ (4) ಹಾಗೂ ಅನಮ್ ಪಾತಿಮಾ (2)ಗೆ ವಿಷವುಣಿಸಿ ಹತ್ಯೆ ಮಾಡಿದ್ದಾರೆ.
ಇದನ್ನೂ ಓದಿ:ನಾಲ್ಕನೇ ಮಗುವೂ ಹೆಣ್ಣೆಂದು ನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ತಂದೆ!
ಉಸ್ನಾ ಕೌಸರ್ ಅವರು ಪಟ್ಟಣದ ಖಾಸಗಿ ನರ್ಸಿಂಗ್ ಹೋಮ್ನಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಒಂದು ವರ್ಷದಿಂದ ಗಂಡ-ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಇದರಿಂದ ಮನನೊಂದು ನಿನ್ನೆ ರಾತ್ರಿ ತನ್ನ ಮೂವರು ಮಕ್ಕಳಿಗೆ ಊಟದಲ್ಲಿ ವಿಷ ಹಾಕಿ ಬಳಿಕ ತಾನೂ ನೇಣು ಬಿಗಿದುಕೊಂಡಿದ್ದಾರೆ. ಸ್ಥಳಕ್ಕೆ ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.