ಮಂಡ್ಯ: ಸಚಿವ ನಾರಾಯಣಗೌಡಗೆ ತಾಕತ್ತು ಇದ್ದರೆ ಸಿಡಿ ಬಿಡುಗಡೆ ಮಾಡಲಿ. ಜಿಲ್ಲಾಡಳಿತ ನ್ಯೂನತೆ ಎತ್ತಿ ಹಿಡಿಯುವುದು ತಪ್ಪು ಎಂದು ತಿಳಿದರೆ, ಹಿ ಈಸ್ ಫೂಲ್ ಎಂದು ಜೆಡಿಎಸ್ ಶಾಸಕ ಸುರೇಶ್ ಗೌಡ ವಾಗ್ದಾಳಿ ನಡೆಸಿದರು.
ನಾರಾಯಣಗೌಡರಿಗಿಂತ ರಾಜಕೀಯವಾಗಿ ನಾನು ಸೀನಿಯರ್. ಜನಪ್ರತಿನಿಧಿಗಳನ್ನು ಬಿಟ್ಟು ಸಭೆ ಮಾಡುತ್ತಿದ್ದಾರೆ. ಗಮನಕ್ಕೆ ಎಂದು ನಮಗೆ ಸಂದೇಶ ಕಳಿಸುತ್ತಾರೆ ಕರೆಯೋದಿಲ್ಲ. ಬಾಂಬೆ ಗೌಡರೇ ಸಿಡಿ ಬಿಡುಗಡೆ ಮಾಡಿ ಎಂದು ಸವಾಲು ಹಾಕಿದರು.
ನಾಗಮಂಗಲ ತಾಲೂಕಿನ ಸೋಮನಹಳ್ಳಿ ಕ್ವಾರಂಟೈನ್ನಲ್ಲಿರುವ ಮಹಿಳೆ ಸಾವಿನ ಬಗ್ಗೆ ಮಾತನಾಡಿ, ಆಕೆಗೆ ಜಿಲ್ಲಾಡಳಿತ ನೆಗೆಟಿವ್ ಎಂದು ಹೇಳುತ್ತಿದೆ. ಆದರೆ ಆಕೆಯ ವರದಿ ಇನ್ನೂ ಬಂದಿಲ್ಲ. ಆ ಮಹಿಳೆಯ ವರದಿಯನ್ನು ಗೌಪ್ಯವಾಗಿ ಇಡಲಾಗಿದೆ. ವರದಿ ಬರದೇ ನೆಗೆಟಿವ್ ಎಂದು ಹೇಗೆ ಘೋಷಣೆ ಮಾಡಿದರು ಎಂದು ಸುರೇಶಗೌಡ ಕಿಡಿಕಾರಿದ್ರು.
ಶಾಸಕರಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಮುಚ್ಚುಮರೆ ಮಾಡಲಾಗುತ್ತಿದೆ. ಹೆಚ್ಚುಕಡಿಮೆ ಆದರೆ ಜವಬ್ದಾರಿ ಯಾರು..? ಟಾಸ್ಕ್ ಫೋರ್ಸ್‌ನಲ್ಲೂ ಅವಕಾಶ ನೀಡಿಲ್ಲವೆಂದು ಆಕ್ರೋಶ ಹೊರಹಾಕಿದರು.
ನಾರಾಯಣಗೌಡರಿಗೆ ಸುರೇಶ್ ಗೌಡ ಸವಾಲು ಮಾಜಿ ಸಚಿವ ಪುಟ್ಟರಾಜು ಮಾತನಾಡಿ, ಜಿಲ್ಲೆಯ ಕೊರೊನಾ ಬೆಳವಣಿಗೆ ಬಗ್ಗೆ ಜೆಡಿಎಸ್ ಶಾಸಕರು ಚರ್ಚೆ ಮಾಡಿದ್ದೇವೆ. ಜಿಲ್ಲೆಯು ಪ್ರಥಮ ಸ್ಥಾನಕ್ಕೆ ಹೋಗುತ್ತಿದೆ. ಇದರಿಂದ ಆತಂಕ ಶುರುವಾಗಿದೆ. ಹೊರ ರಾಜ್ಯದವರನ್ನು ಸರಿಯಾಗಿ ತಪಾಸಣೆ ಮಾಡುತ್ತಿಲ್ಲ. ನೆಗೆಟಿವ್ ಪಾಸಿಟಿವ್ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಇದರ ಜವಾಬ್ದಾರಿ ಯಾರು ಎಂಬುದನ್ನು ಜಿಲ್ಲಾಡಳಿತ ತಿಳಿಸಬೇಕು. ಜಿಲ್ಲಾಧಿಕಾರಿ ಎಲ್ಲಾ ಶಾಸಕರ ಸಭೆಯನ್ನು ಗುರುವಾರದ ಒಳಗೆ ಕರೆದು ಮಾಹಿತಿ ನೀಡಬೇಕು. ಇದು ನಮ್ಮ ಒತ್ತಾಯ ಎಂದು ಎಚ್ಚರಿಸಿದರು.
ರಾಜ್ಯ ಸರ್ಕಾರ 30ರವರೆಗೂ ಅಂರಾಜ್ಯದವರು ಬರಬಾರದು ಎಂದು ಆದೇಶ ಮಾಡಿದೆ. ಮುಂಬೈನಿಂದ ಬಂದ ನಮ್ಮ ಸಹೋದರರ ಫಲಿತಾಂಶ ಬಿಡುಗಡೆ ಮಾಡಬೇಕು. ಫಲಿತಾಂಶ ಕುರಿತು ಆತಂಕ ಶುರುವಾಗಿದೆ. ಫಲಿತಾಂಶ ಸರಿಯಾಗಿ ನೀಡುತ್ತಿಲ್ಲ. ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಪ್ರಶ್ನಿಸಿದರೆ, ಧಮ್ಕಿ ಹಾಕುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಜೆಡಿಎಸ್ ಶಾಸಕರ ಸಿಡಿಯನ್ನು ದಯಮಾಡಿ ಸಚಿವರು ಬಿಡುಗಡೆ ಮಾಡಬೇಕು. ಸರಿಯಾಗಿ ನಡೆದುಕೊಂಡರೆ ಬೆಂಬಲ ನೀಡುತ್ತೇವೆ. ಇಲ್ಲವಾದರೆ ಹೋರಾಟ ಎಂದು ಎಚ್ಚರಿಸಿದರು. ಜಿಲ್ಲಾಧಿಕಾರಿ ಎಲ್ಲರಿಗೂ ಜಿಲ್ಲಾಧಿಕಾರಿ. ಕೇವಲ ಸಚಿವರಿಗೆ ಮಾತ್ರ ಜಿಲ್ಲಾಧಿಕಾರಿ ಅಲ್ಲ. ಉತ್ತರ ನೀಡಬೇಕು ಎಂದರು.