ಸಚಿವ ನಾರಾಯಣ್ ಗೌಡ ಹೇಳಿಕೆ ಕುರಿತಾಗಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಶಾಸಕ ರವೀಂದ್ರ ಶ್ರೀಕಂಠಯ್ಯ ಮಂಡ್ಯ:ನಾರಾಯಣ ಗೌಡರಿಗೆ ಕುಮಾರಣ್ಣನ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ಈ ಬಾರಿ ಅವರಿಗೆ ಠೇವಣಿಯೂ ಬರಲ್ಲ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಕಿಡಿ ಕಾರಿದರು. ಶ್ರೀರಂಗಪಟ್ಟಣದಲ್ಲಿ ಭಾನುವಾರ ಮಾತನಾಡಿದ ಅವರು, ನಾರಾಯಣ ಗೌಡರು ಜೆಡಿಎಸ್ ಪಕ್ಷದಲ್ಲಿದ್ದಾಗ ಕೆ.ಆರ್.ಪೇಟೆಯಲ್ಲಿ ಎರಡು ಬಾರಿ ಎಂಎಲ್ಎ ಆಗಿದ್ದರು. ಆದರೂ ದೇವೇಗೌಡರ ಮನೆಯವರಿಂದ ನನಗೆ ಅನ್ಯಾಯ ಆಗಿದೆ ಎಂದಿದ್ದಾರೆ.
ಎರಡು, ಮೂರು ವರ್ಷದ ಅಧಿಕಾರದ ಆಸೆಗೋಸ್ಕರ ನಿಮ್ಮನ್ನು ಕಾಪಾಡಿದ ಪಕ್ಷಕ್ಕೆ ಮೋಸ ಮಾಡಿ ಹೋಗಿದ್ದೀರಿ. ನಿಮಗೆ ಸ್ಥಾನಗಳನ್ನು ಕೊಟ್ಟ ಅದೇ ಪಕ್ಷದ ಬಗ್ಗೆ ಆರೋಪ ಮಾಡಿ ಈಗ ಮಾತನಾಡುತ್ತೀರಲ್ಲ, ಜನ ನಿಮಗೆ ಓಟ್ ಕೊಡ್ತಾರಾ?. ನಿಮಗೆ ದೇವಗೌಡರ ಮನೆಯವರು ಏನು ಅನ್ಯಾಯ ಮಾಡಿದ್ದಾರೆ ಎಂದು ಕೇಳಿದರು.
ನಾರಾಯಣ ಗೌಡರಿಗೆ ಈ ಬಾರಿ ಠೇವಣಿ ಬರುವುದಿಲ್ಲ. ಹಳ್ಳಿಗಳಲ್ಲಿ ಹೋಗಿ ಅವರು ಓಟ್ ಕೇಳೋಕೆ ಸಾಧ್ಯವಿಲ್ಲ. ಕಾರ್ಯಕರ್ತರು ರೊಚ್ಚಿಗೆದ್ದು ನಿಂತಿದ್ದಾರೆ. ನಾರಾಯಣ್ ಗೌಡ ಬರೀ ಮೋಸ ಮಾಡಿಕೊಂಡೇ ಕಾಲ ಕಳೆದಿದ್ದಾರೆ. ಇವರಿಗೆಲ್ಲ ಅವಕಾಶ ಬರುವ ಮುನ್ನವೇ ದೊಡ್ಡಮಟ್ಟದಲ್ಲಿ ಅವಕಾಶ ಬಂದಿದ್ದೇ ನನಗೆ. ರಾಜ್ಯದ ದೊಡ್ಡ ನಾಯಕರೇ ನನ್ನನ್ನು ಕರೆದು ಮಾತನಾಡಿದ್ದಾರೆ. ಮಂತ್ರಿ ಮಾಡುತ್ತೇವೆ, ಜಿಲ್ಲಾ ಉಸ್ತುವಾರಿ ಮಾಡುತ್ತೇವೆ ಒಪ್ಪಿಕೊಳ್ಳಿ ಎಂದಿದ್ದರು. ಆದರೆ ನಮ್ಮ ಕುಟುಂಬದಲ್ಲಿ ಇದೆಲ್ಲಾ ನಡೆದು ಬಂದಿಲ್ಲ. ನಾವು ಪಕ್ಷ ಬಿಡುವುದಿಲ್ಲ ಅಂತ ಹೇಳಿದ್ದೆ ಎಂದು ತಿಳಿಸಿದರು.
ಮುಂದುವರೆದು ಮಾತನಾಡಿ, ಸಿಕ್ಕಿದ್ದನ್ನು ಬಾಚಿಕೊಂಡು ಮಂತ್ರಿಯಾಗಿ, ಈಗ ಕುಮಾರಣ್ಣನ ಬಗ್ಗೆ ಮಾತನಾಡುತ್ತೀರಿ. ಮುಂದಿನ ದಿನಗಳಲ್ಲಿ ನಾವೂ ಮಾತನಾಡಬೇಕಾಗುತ್ತದೆ. ಕುಮಾರಣ್ಣನ ಬಗ್ಗೆ ಮಾತನಾಡುವ ಯೋಗ್ಯತೆ ನಿಮಗಿಲ್ಲ. ಯಡಿಯೂರಪ್ಪ ಅವರ ಹೆಸರ ಮೇಲೆ ಗೆದ್ದುಬಿಟ್ಟು, ಕುಮಾರಣ್ಣನ ಮೇಲೆ ಸವಾರಿ ಮಾಡಿದರೆ ನಾವು ಯಾರೂ ಸಹಿಸಿಕೊಳ್ಳಲ್ಲ. ನಿಮ್ಮ ನಡವಳಿಕೆ, ಮಾತು ಹದ್ದುಬಸ್ತಲ್ಲಿ ಇದ್ದರೆ ಉತ್ತಮ. ಇಲ್ಲವಾದರೆ, ನಾವು ಅಲ್ಲೇ ಬಂದು ಹೊಸ ವಿಚಾರ ಚರ್ಚೆ ಮಾಡಬೇಕಾಗುತ್ತೆ ಎಂದು ರವೀಂದ್ರ ಶ್ರೀಕಂಠಯ್ಯ ತಮ್ಮ ಭಾಷಣದಲ್ಲಿ ಎಚ್ಚರಿಕೆ ಕೊಟ್ಟರು.
ಇದನ್ನೂ ಓದಿ:ಕಾರವಾರದಲ್ಲಿ ಕೊನೆಗೂ ತೆರೆದ ಬ್ಲಾಕ್ ಕಾಂಗ್ರೆಸ್ ಕಚೇರಿ