ಮಂಡ್ಯ :ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ದನಿ ಎತ್ತಿರುವ ಸಂಸದೆ ಸುಮಲತಾ ಅಂಬರೀಷ್ ತಮ್ಮ ಹೋರಾಟವನ್ನು ದೆಹಲಿ ಮಟ್ಟದಲ್ಲಿ ಮುಂದುವರೆಸಿದ್ದಾರೆ. ನಿನ್ನೆ ಕೂಡ ಸಂಸತ್ತಿನಲ್ಲಿ ಗಣಿಗಾರಿಕೆ ವಿಚಾರ ಪ್ರಸ್ತಾಪಿಸಿ, ಗಣಿ ಧೂಳಿನಿಂದಾಗಿ ಉಂಟಾಗುತ್ತಿರುವ ದುಷ್ಟರಿಣಾಮದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಇನ್ನೊಂದೆಡೆ ಸುಮಲತಾ ವಿಚಾರದಲ್ಲಿ ಸೈಲೆಂಟಾಗಿದ್ದ ಶ್ರೀರಂಗಪಟ್ಟಣದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಮತ್ತೆ ಗುಡುಗಿದ್ದಾರೆ.
ಸಕ್ಕರೆ ನಾಡು ಮಂಡ್ಯದಲ್ಲಿ ಆರಂಭವಾಗಿರುವ ಅಕ್ರಮ ಕಲ್ಲು ಗಣಿಗಾರಿಕೆ ರಾಜಕೀಯ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಸಂಸದೆ ಸುಮಲತಾ ಅಂಬರೀಶ್ ಗಣಿಗಾರಿಕೆ ವಿರುದ್ಧ ಆರಂಭಿಸಿರುವ ಹೋರಾಟ ದೆಹಲಿ ಅಂಗಳ ತಲುಪಿದೆ. ಸಂಸತ್ ಅಧಿವೇಶನದಲ್ಲಿ ಮಂಡ್ಯದ ಅಕ್ರಮ ಗಣಿಗಾರಿಕೆ ವಿಚಾರ ಪ್ರಸ್ತಾಪಿಸಿದ್ದಾರೆ.
ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿಚಾರ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸಿದ ಸುಮಲಾತಾ, ಅಕ್ರಮ ಕಲ್ಲು ಗಣಿಯಲ್ಲಿ ಭಾರಿ ಪ್ರಮಾಣದ ಸ್ಫೋಟಕ ಹಾಗೂ ರಾಸಾಯನಿಕ ಬಳಸಲಾಗುತ್ತಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಶ್ವಾಸಕೋಶ ಸೇರಿದಂತೆ ಹಲವು ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.