ಮಂಡ್ಯ:ಕರ್ತವ್ಯಲೋಪ ಹಾಗೂ ಸತತ ಗೈರು ಹಾಜರಿಯಿಂದ ಗ್ರಾಮಸ್ಥರ ಆಕ್ರೋಶಕ್ಕೆ ಗುರಿಯಾಗಿದ್ದ ಹೊಳಲು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರವಿಕುಮಾರ್ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಕರ್ತವ್ಯದಿಂದ ಅಮಾನತುಗೊಳಿಸುವಂತೆ ಮತ್ತು ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಶಾಸಕ ಸಿ.ಎಸ್.ಪುಟ್ಟರಾಜು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚಿಸಿದರು.
ಕೊರೊನಾ ಎರಡನೇ ಅಲೆಯ ಹಾವಳಿಯಿಂದ ಜನಸಾಮಾನ್ಯರು ತೊಂದರೆಯಲ್ಲಿರುವಾಗ ವಾರಕ್ಕೊಮ್ಮೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಹಾಜರಾತಿ ಪುಸ್ತಕದಲ್ಲಿ ಮುಂಚಿತವಾಗಿ ಸಹಿ ಹಾಕಿ ತೆರಳುತ್ತಿದ್ದ ವೈದ್ಯಾಧಿಕಾರಿ ವರ್ತನೆ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಶಾಸಕ ಪುಟ್ಟರಾಜು ಭೇಟಿ ನೀಡಿ ಪರಿಶೀಲಿಸಿದರು.