ಮಂಡ್ಯ:ಸುಮಲತಾ ಮಾಡಿದ ಸವಾಲನ್ನು ಶಾಸಕ ಪುಟ್ಟರಾಜು ಸ್ವೀಕರಿಸಿದ್ದಾರೆ. ಸುಮಲತಾ ಹೇಳಿದ ದಿನ ನಾನು ಮೇಲುಕೋಟೆಗೆ ಬಂದು ಆಣೆ ಪ್ರಮಾಣ ಮಾಡಲು ಸಿದ್ದ ಎಂದು ಅವರು ಹೇಳಿದ್ದಾರೆ.
ಕೆಲವು ದಿನಗಳಿಂದ ಸಂಸದೆ ಹಾಗೂ ದಳಪತಿಗಳ ನಡುವೆ ನಡೆಯುತ್ತಿರುವ ಮಾತಿನ ಯುದ್ದ ಮತ್ತೊಂದು ಘಟ್ಟ ತಲುಪಿದೆ. ಸಂಸದೆ ಸುಮಲತಾ ಈ ಹಿಂದೆ ಕಮಿಷನ್ ಆರೋಪದಡಿ ಜೆಡಿಎಸ್ ಶಾಸಕರಿಗೆ ಮೇಲುಕೋಟೆಗೆ ಬಂದು ಆಣೆ ಪ್ರಮಾಣ ಮಾಡಲು ಸವಾಲು ಹಾಕಿದ್ದರು. ಇದನ್ನು ಸ್ವೀಕರಿಸಿದ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎಸ್ ಪುಟ್ಟರಾಜು ಮೇಲುಕೋಟೆಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ.
ಸುಮಲತಾ ಅವರ ಟಾರ್ಗೆಟ್ ಜೆಡಿಎಸ್:ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಪುಟ್ಟರಾಜು, ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದಿನಾಂಕ ನಿಗದಿ ಮಾಡಿದ್ರೆ ಎಲ್ಲಿಗೆ ಬೇಕಾದರೂ ಬಂದು ಪ್ರಮಾಣ ಮಾಡ್ತೀನಿ. ಜನ ಅವರನ್ನು ಆಯ್ಕೆ ಮಾಡಿರುವುದು ಕೆಲಸ ಮಾಡಲು. ಅಂಬರೀಶ್ ಅವರ ಪತ್ನಿ ಎನ್ನುವ ಕಾರಣಕ್ಕೆ ಅವರು ಗೆದ್ದಿದ್ದಾರೆ. ಸುಮಲತಾ ಅವರ ಟಾರ್ಗೆಟ್ ಜೆಡಿಎಸ್. ನಮ್ಮ ಬಗ್ಗೆ ಮಾತನಾಡಿದರೆ ಹೀರೋ ಆಗುವ ಬಯಕೆ. ಶಾಸಕನಾಗಿ ನಾನು ಸದನದಲ್ಲಿ ಯಾವ ರೀತಿ ಮಾತನಾಡಿದ್ದೇನೆ ಇತಿಹಾಸ ತೆಗೆದು ನೋಡಲಿ. ಮಾತನಾಡುವುದರಿಂದ ದೊಡ್ಡ ಲೀಡರ್ ಆಗುತ್ತೇನೆ ಅಂದುಕೊಂಡಿದ್ದರೆ ಅದನ್ನು ಬಿಟ್ಟು ಬಿಡಿ ಎಂದು ಕಿಡಿಕಾರಿದರು.
ಎಲ್ಲಾ ರಾಜಕಾರಣಿಗಳು ಮುಡಾ ಸೈಟ್ ಪಡೆದಿದ್ದಾರೆ:ಗೌರವದಿಂದ ರಾಜಕಾರಣ ಮಾಡಿ. ನನ್ನ ವ್ಯಕ್ತಿತ್ವ ಅಂಬರೀಶ್ ಅವರಿಗೆ ಗೊತ್ತಿತ್ತು. ನಮ್ಮ ಮನೆ ದುಡ್ಡು ಹಾಕಿ ಅಂಬರೀಶ್ ಅವರಿಗೆ ಚುನಾವಣೆ ಮಾಡಿದ್ದೆ. ಅಂಬರೀಶ್ ಹಾಗೂ ನನ್ನ ಸಂಬಂಧ ಎಂತದ್ದು ಅನ್ನೋದನ್ನ ರಾಕ್ ಲೈನ್ ಅವರನ್ನ ಕೇಳಿ. ಅಂಬರೀಶ್ ಕುಟುಂಬ ಸೇರಿದಂತೆ ಜಿಲ್ಲೆಯ ಎಲ್ಲಾ ರಾಜಕಾರಣಿಗಳು ಮುಡಾ ಸೈಟ್ ಪಡೆದಿದ್ದಾರೆ. ಈ ವಿಚಾರವಾಗಿ ನನ್ನ ವಿರುದ್ಧ ಕೋರ್ಟ್ನಲ್ಲಿ ಕೇಸ್ ಇದೆ. ಜನಪ್ರತಿನಿಧಿಗಳ ನ್ಯಾಯಾಲಯ ಹೊರ ದೇಶಕ್ಕೆ ಹೋಗುವುದಾದರೆ ಅನುಮತಿ ಪಡೆಯುವಂತೆ ಹೇಳಿದೆ. ನನ್ನ ದಂತ ಚಿಕಿತ್ಸೆಗೆ ವಿದೇಶಕ್ಕೆ ಹೋಗಲು ಅನುಮತಿ ಕೇಳಿದ್ದೆ. ದಾಖಲೆಗಳಿದ್ದರೆ ತರಲಿ. ಅವರ ವಿರುದ್ಧ ನಮ್ಮ ಬಳಿಯೂ ದಾಖಲೆಗಳಿವೆ ಎಂದರು.