ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯಲ್ಲಿ ನೆರೆಯ ತುಮಕೂರು, ಹಾಸನ, ಶಿವಮೊಗ್ಗಕ್ಕಿಂತ ಹಿಂದುಳಿದಿದೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂದು ಶಾಸಕ ಎಂ ಶ್ರೀನಿವಾಸ್ ಒತ್ತಾಯಿಸಿದರು.
ಮಂಡ್ಯದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಈಗಾಗಲೇ ಅನೇಕ ಅಭ್ಯರ್ಥಿಗಳು ಉದ್ಭವಗೊಂಡಿದ್ದಾರೆ. ಹೆಚ್ ಡಿ ಕುಮಾರಸ್ವಾಮಿ ಇಲ್ಲಿ ಸ್ಪರ್ಧಿಸಿದರೆ ಮಂಡ್ಯ ಉದ್ಧಾರವಾಗುತ್ತದೆ ಎಂಬ ಭಾವನೆ ನನ್ನದಾಗಿದ್ದು, ಕ್ಷೇತ್ರ ತ್ಯಾಗಕ್ಕೆ ಮುಂದಾಗುತ್ತೇನೆ ಎಂದರು. ಈಗಾಗಲೇ ಎರಡು ಬಾರಿ ಹೇಳಿದ್ದೇನೆ. ಇದೀಗ ಮೂರನೇ ಬಾರಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಸ್ಪರ್ಧಿಸುವಂತೆ ಆಹ್ವಾನಿಸಿದ್ದೇನೆ. ಅವರನ್ನು ಹೊರತುಪಡಿಸಿದರೆ ನಾನು ಸ್ಪರ್ಧಿಸಲು ಬದ್ಧನಾಗಿದ್ದೇನೆ. ನನ್ನೊಟ್ಟಿಗೆ ಹೆಚ್ ಎನ್ ಯೋಗೇಶ್, ಹೆಚ್ ಎಸ್ ಮಂಜು ಸ್ಪರ್ಧಾಕಾಂಕ್ಷಿಗಳಾಗಿದ್ದಾರೆ ಎಂದರು.
ಕ್ಷೇತ್ರಕ್ಕೆ ಆಗಿರುವ ವಂಚನೆ ಸರಿದೂಗಿಸಬೇಕು:ಅನ್ಯ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾದು ನೋಡುತ್ತೇನೆ, ಪಕ್ಷದ ತೀರ್ಮಾನಕ್ಕೆ ಬದ್ಧನಾಗುತ್ತೇನೆ ಎಂದು ಗೊಂದಲದ ಉತ್ತರ ನೀಡಿದರು. ಅಭ್ಯರ್ಥಿ ವಿಚಾರದಲ್ಲಿ ಆಗಿರುವ ಗೊಂದಲ ನಿವಾರಣೆಗೆ ಕುಮಾರಸ್ವಾಮಿಯೇ ಸ್ಪರ್ಧಿಸಬೇಕು. ಅನುದಾನ ತಾರತಮ್ಯದಲ್ಲಿ ಕ್ಷೇತ್ರಕ್ಕೆ ಆಗಿರುವ ವಂಚನೆ ಸರಿದೂಗಿಸಬೇಕೆಂದು ಆಗ್ರಹಿಸಿದರು.
ಶಕ್ತಿ ಪ್ರದರ್ಶನದ ಮೂಲಕ ನಾಮಪತ್ರ ಸಲ್ಲಿಕೆ: 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ನಿನ್ನೆ (ಸೋಮವಾರ) ಮಂಡ್ಯ ಜಿಲ್ಲೆಯಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಬೃಹತ್ ರ‍್ಯಾಲಿಗಳ ಮೂಲಕ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷದ ಅಭ್ಯರ್ಥಿಗಳು ಶಕ್ತಿ ಪ್ರದರ್ಶನ ಮಾಡಿದ್ದಾರೆ.