ಮಂಡ್ಯ: ಜೆಡಿಎಸ್ ಭದ್ರಕೋಟೆ ಎನಿಸಿರುವ ಮಂಡ್ಯದಲ್ಲಿ ಇದೀಗ ಬಿರುಕು ಮೂಡುವ ಅನುಮಾನ ಕಾಣುತ್ತಿದೆ. ಏಳಕ್ಕೆ ಏಳು ಸ್ಥಾನಗಳನ್ನು ಗೆದ್ದಿದ್ದ ಜೆಡಿಎಸ್‌ನಿಂದ ಓರ್ವ ಶಾಸಕ ಈಗಾಗಲೇ ತೆನೆ ತೊರೆದು ಕಮಲ ಹಿಡಿದಿದ್ದಾರೆ. ಇದೀಗ ಜೆಡಿಎಸ್ ಶಾಸಕ ಸಹ ಸ್ವಪಕ್ಷದವರ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಜೆಡಿಎಸ್ ಭದ್ರಕೋಟೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ಕೆ.ಆರ್. ಪೇಟೆಯ ಕೆ.ಸಿ. ನಾರಾಯಣಗೌಡ ಅವರು ಮಾಜಿ ಸಿಎಂ ಕುಮಾರಸ್ವಾಮಿಗೆ ಶಾಕ್ ನೀಡಿದ್ದರು. ಇದೀಗ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಶ್ರೀನಿವಾಸ್ ತಮ್ಮ ಮನಸ್ಸಿನ ಕೆಲ ನೋವನ್ನು ಬಹಿರಂಗ ಸಭೆಯಲ್ಲಿ ಹೊರ ಹಾಕುವ ಮೂಲಕ ತೆನೆ ಕೆಳಗಿಳಿಸುವ ಮುನ್ಸೂಚನೆ ನೀಡಿದ್ರಾ ಎಂಬ ಅನುಮಾನ ಮೂಡಿದೆ.
ಸ್ವಪಕ್ಷದ ಜಿಲ್ಲಾಧ್ಯಕ್ಷರ ಬಗ್ಗೆ ಅಸಮಾಧಾನ:
ಇತ್ತೀಚೆಗೆ ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಜೆಡಿಎಸ್ ಅಭ್ಯರ್ಥಿಗಳಿಗೆ ಮಿಷನ್-123 ಹಾಗೂ ಪಂಚರತ್ನ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡುವ ಮೂಲಕ ಮುಂಬರುವ ಚುನಾವಣೆಯ ಅಭ್ಯರ್ಥಿಗಳನ್ನು ಗುರುತಿಸಲು ಮೆಂಬರ್ಶಿಫ್ ಟಾಸ್ಕ್ ನೀಡಿದ್ದಾರೆ. ಆದ್ರೆ ಮಂಡ್ಯದಲ್ಲಿ ಜಿಲ್ಲಾಧ್ಯಕ್ಷರು ಸರಿಯಾಗಿ ಕೆಲಸ ನಿರ್ವಹಣೆ ಮಾಡುತ್ತಿಲ್ಲ. ಯಾವ ಸಭೆಗಳಿಗೂ ಸರಿಯಾಗಿ ಹಾಜರಾಗುವುದಿಲ್ಲ. ಆತನ ಬಗ್ಗೆ ನನಗೆ ತುಂಬಾ ನೋವಿದೆ. ಆದ್ರೆ ನಾನು ಯಾರ ಬಳಿಯೂ ಹೇಳಿಕೊಂಡಿಲ್ಲ ಎಂದು ಜಿಲ್ಲಾಧ್ಯಕ್ಷ ಡಿ. ರಮೇಶ್ ಬಗ್ಗೆ ಮಂಡ್ಯದ ಕರ್ನಾಟಕ ಸಂಘದಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಬೇಸರ ಹೊರಹಾಕಿದರು.