ಕರ್ನಾಟಕ

karnataka

ETV Bharat / state

'ಮೈಶುಗರ್ ಆಸ್ತಿಯಲ್ಲಿ ಯಾವುದಾದರೂ ಒಂದು ಸೈಟ್ ಹರಾಜು ಮಾಡಿ ಕಾರ್ಖಾನೆ ನಡೆಸಿ'

ಮೈಶುಗರ್ ಆಸ್ತಿಯ ಒಂದು ಸೈಟ್ ಹರಾಜು ಮಾಡಿದ್ರೆ 400-500 ಕೋಟಿ ರೂ ಹಣ ಬರುತ್ತದೆ. ಅದರಿಂದ ಬಂದ ಹಣದಿಂದ ಕಾರ್ಖಾನೆ ಪ್ರಾರಂಭ ಮಾಡಿ ಎಂದು ಶಾಸಕ ಡಾ.ಕೆ.ಅನ್ನದಾನಿ ಸಲಹೆ ನೀಡಿದ್ದಾರೆ.

MLA Dr K Annadani
ಶಾಸಕ ಡಾ.ಕೆ.ಅನ್ನದಾನಿ

By

Published : Sep 19, 2021, 8:49 PM IST

ಮಂಡ್ಯ: ಮೈಶುಗರ್ ಆಸ್ತಿಯಲ್ಲಿ ಯಾವುದಾದರೂ ಒಂದು ಸೈಟ್ ಹರಾಜು ಮಾಡಿ ಕಾರ್ಖಾನೆ ನಡೆಸಿ ಎಂದು ಸರ್ಕಾರಕ್ಕೆ ಜೆಡಿಎಸ್ ಶಾಸಕ ಡಾ.ಕೆ.ಅನ್ನದಾನಿ ಒತ್ತಾಯಿಸಿದ್ದಾರೆ‌.

ಮೈಶುಗರ್ ಸಕ್ಕರೆ ಕಾರ್ಖಾನೆ ಆರಂಭಿಸುವಂತೆ ಶಾಸಕ ಡಾ.ಕೆ.ಅನ್ನದಾನಿ ಒತ್ತಾಯ

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಶುಗರ್ ಸಕ್ಕರೆ ಕಾರ್ಖಾನೆ ನಡೆಸಲು ಸರ್ಕಾರ ವಿಫಲವಾಗಿದೆ. ಅದರ ಆಸ್ತಿಯ ಒಂದು ಸೈಟ್ ಹರಾಜು ಮಾಡಿದ್ರೆ 400-500 ಕೋಟಿ ಹಣ ಬರುತ್ತದೆ. ಅದರಿಂದ ಬಂದ ಹಣದಿಂದ ಕಾರ್ಖಾನೆ ಪ್ರಾರಂಭ ಮಾಡಿ ಎಂದು ಸಲಹೆ ನೀಡಿದರು.

ಸಿಎಂ ಜತೆ ಅರ್ಧಗಂಟೆ ಚರ್ಚೆಗೆ ಕಾಲಾವಕಾಶ:ಮೈಶುಗರ್ ವಿಚಾರವನ್ನು ಸದನದಲ್ಲಿ ಪ್ರಸ್ತಾಪ ಮಾಡಿದ್ದೇನೆ. ಮಾಜಿ ಸಿಎಂ ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ ಚರ್ಚೆಗೆ ಅವಕಾಶ ಕೊಡಿಸಿದ್ದಾರೆ.‌ ಈಗ ಸರ್ಕಾರವೇ ಕಾರ್ಖಾನೆ ನಡೆಸಬೇಕು. ಇದರ ಬಗ್ಗೆ ಸೋಮವಾರ ಸಿಎಂ ಜತೆ ಅರ್ಧಗಂಟೆ ಚರ್ಚೆಗೆ ಕಾಲಾವಕಾಶ ಕೊಟ್ಟಿದ್ದಾರೆ. ಹೀಗಾಗಿ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದರು.

ಮೈಶುಗರ್ ಆಸ್ತಿ 2 ಸಾವಿರ ಕೋಟಿ ಬೆಲೆ ಬಾಳುತ್ತದೆ: ಸುದೀರ್ಘವಾಗಿ ಮೈಶುಗರ್ ಬಗ್ಗೆ ಚರ್ಚೆ ಮಾಡುತ್ತೇನೆ. ಮೈಶುಗರ್ ಆಸ್ತಿಗೆ ಯಾರು ಹುನ್ನಾರ ಮಾಡ್ತಿದ್ದಾರೆ.? ಬೆಂಗಳೂರು, ಮೈಸೂರು, ಮಂಡ್ಯದಲ್ಲಿ ಸುಮಾರು 250 ಎಕರೆ ಇದೆ. ಇದರ ಮೌಲ್ಯ 2 ಸಾವಿರ ಕೋಟಿ ಬೆಲೆ ಬಾಳುವಂತದ್ದು. ಹೀಗಾಗಿ‌ 400 ಕೋಟಿ ರೂ. ಬಂಡವಾಳ ಹಾಕಿ ಒಳ್ಳೆಯ ಅಧಿಕಾರಿಗಳನ್ನು ನೇಮಿಸಿ ನಡೆಸುವುದಕ್ಕೆ ಆಗಿಲ್ಲವಾದರೆ ಹೇಗೆ ಎಂದು ಪ್ರಶ್ನಿಸಿದರು. ಮೈಶುಗರ್ ಆಸ್ತಿಯಲ್ಲಿ ಯಾವುದಾದರೂ ಒಂದು ಮೂಲೆಯ ಸೈಟ್ ಹರಾಜು ಮಾಡಿ. ರೈತಸಂಘ ಹಾಗೂ ದೇವೇಗೌಡರ ಸಲಹೆ ತೆಗೆದುಕೊಂಡು ಸರ್ಕಾರಿ ಸ್ವಾಮ್ಯದಲ್ಲೇ ನಡೆಸಿ ಎಂದು ಅವರು ಒತ್ತಾಯಿಸಿದರು.

ಶಿಷ್ಯಂದಿರೆ ಆನ್​​ಲೈನ್ ನಲ್ಲಿ ಕ್ರಿಕೆಟ್ ಬೆಡ್ಡಿಂಗ್, ಇಸ್ಪೀಟ್ ದಂಧೆಗೆ ಸಹಕಾರ:

ಮಳವಳ್ಳಿಯಲ್ಲಿ ಜೂಜು ದಂಧೆ ವಿಚಾರವಾಗಿ ಮಾಜಿ ಸಚಿವ ನರೇಂದ್ರ ಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಜೂಜು ದಂಧೆ ವಿಚಾರವಾಗಿ ಆರೋಪ ಮಾಡುವವರ ಶಿಷ್ಯಂದಿರೇ ಆನ್​​ಲೈನ್ ನಲ್ಲಿ ಕ್ರಿಕೆಟ್ ಬೆಟ್ಟಿಂಗ್, ಇಸ್ಪೀಟ್ ದಂಧೆಗೆ ಸಹಕಾರ ನೀಡುತ್ತಿದ್ದಾರೆ. ಅವರ ಕಡೆಯವರೇ ಈ ರೀತಿಯ ಕೆಲಸದಲ್ಲಿ ಭಾಗಿಯಾಗಿ ದಂಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ದಂಧೆ ಎಲ್ಲಿ ನಡೆಯುತ್ತಿದೆ ಎಂದು ನಾನು ಸಾಬೀತು ಮಾಡುತ್ತೇನೆ: ಯಾವ ಜೂಜು ಅಡ್ಡ?, ಯಾವಾಗ ನಡೆಯುತ್ತಿದೆ?, ಎಲ್ಲಿಂದ ನಡೆಯುತ್ತಿದೆ?, ಅವರ ಹಿನ್ನೆಲೆ ಏನು? ಈ ದಂಧೆ ಎಲ್ಲಿಂದ ಪ್ರಾರಂಭ ಆಯ್ತು?, ಹೇಗೆ ಪ್ರಾರಂಭವಾಯ್ತು?. ಈಗ ಹೇಗೆ ನಡೆಯುತ್ತಿದೆ? ಎಂದು ನಾನು ಸಾಬೀತು ಎಂದರು.

ತಾಕತ್ ಇದ್ರೆ ದಲ್ಲಾಳಿ ಯಾರು ಅಂತ ಹೇಳಿ: ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಮಳವಳ್ಳಿಯಲ್ಲಿ ಯಾವುದೇ ದಲ್ಲಾಳಿಗಳಿಲ್ಲ. ಅಂತವರಿದ್ದರೆ ಅವರ ಹೆಸರನ್ನ ಹೇಳಲಿ. ಕಾನೂನಾತ್ಮಕ ಕ್ರಮ ವಹಿಸುತ್ತೇನೆ. ಅದನ್ನ ಬಿಟ್ಟು ಎಲ್ಲೊ ಒಂದು ಕಡೆ ನಿಂತು ದಲ್ಲಾಳಿ ಇದ್ದಾರೆ ಅಂತ ಹೇಳೋದಲ್ಲ. ನಿಮಗೆ ತಾಕತ್ ಇದ್ರೆ ದಲ್ಲಾಳಿ ಯಾರು ಅಂತ ಹೇಳಿ ಎಂದು ಬಹಿರಂಗ ಸವಾಲು ಹಾಕಿದರು.

ನಾನು ಕ್ಲೀನ್ ಹ್ಯಾಂಡ್.. ಯಾರಿಗೂ ಹೆದರುವುದಿಲ್ಲ:ಮಧ್ಯವರ್ತಿಗಳ ವಿಚಾರವಾಗಿ ವಿಡಿಯೋ ಬಿಡುಗಡೆ ಹೇಳಿಕೆ ವಿಚಾರವಾಗಿ ಮಾತನಾಡಿ, ಮಳವಳ್ಳಿಯಲ್ಲಿ ನಾನು ಒಂದು ವೇದಿಕೆ ಹಾಕಿಕೊಡುತ್ತೇನೆ. ಬಂದು ಯಾವ ವಿಡಿಯೋ ಇದೆ, ಯಾರು ಬ್ರೋಕರ್ ಇದ್ದಾರೆ, ಎಲ್ಲಿ ಇಸ್ಪೀಟ್ಅಡ್ಡ ಇದೆ ಎಂದು ಹೇಳಿ. ನಾನು ಕ್ಲೀನ್ ಹ್ಯಾಂಡ್ ನಾನು ಯಾರಿಗೂ ಹೆದರುವುದಿಲ್ಲ ಎಂದು ಗುಡುಗಿದರು.

ನಮ್ಮ ಅಪ್ಪ ಕೊಟ್ಟಿದ್ದ 2 ಎಕರೆ ಜಮೀನು ಇದೆ ಅಷ್ಟೇ: ನಾನು ಕಲ್ಲು ಗಣಿ ಮಾಡಬೇಕಾಗಿಲ್ಲ, ಮರಳು ದಂಧೆ ಮಾಡಬೇಕಾಗಿಲ್ಲ. ಮಳವಳ್ಳಿಯಲ್ಲಿ ನಾನು ಪಾರದರ್ಶಕವಾಗಿದ್ದೇನೆ. ನನ್ನ ಹತ್ತಿರ ಯಾವುದೇ ಕಾಂಪ್ಲೆಕ್ಸ್, ಲ್ಯಾಂಡ್ ಇಲ್ಲ. ನಮ್ಮ ಅಪ್ಪ ಕೊಟ್ಟಿದ್ದ 2 ಎಕರೆ ಜಮೀನು ಇದೆ. ಬೇರೆ ಏನಾದ್ರೂ ಇದ್ದರೆ ಬಹಿರಂಗವಾಗಿ ಹರಾಜಿಗೆ ಇಡುತ್ತೇನೆ. ಯಾರು ಬೇಕಾದರೂ ತೆಗೆದುಕೊಳ್ಳಲ್ಲಿ ಎಂದರು.

ಉಗ್ರ ಹೋರಾಟವಲ್ಲ, ಪಂಜಿನ ಮೆರವಣಿಗೆ ಮಾಡಲಿ: ಜನರಿಗಾಗಿ ಉಗ್ರ ಹೋರಾಟ ಮಾಡುತ್ತೇವೆ ಎಂಬ ನರೇಂದ್ರ ಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ ಉಗ್ರ ಹೋರಾಟವಲ್ಲ, ಪಂಜಿನ ಮೆರವಣಿಗೆ ಮಾಡಲಿ. ನಾನು ಹಲವು ಹೋರಾಟ ಮಾಡಿದ್ದೇನೆ. ರಾಜಕೀಯ, ಸಂಘಟನೆಯನ್ನೂ ಮಾಡುತ್ತಿದ್ದೇನೆ. ನಿಮ್ಮ ಹೋರಾಟವನ್ನು ನಾನು ಬಲ್ಲೆ. ನೀವು ಮಾಡುವ ಹೋರಾಟ ಗೋಸುಂಬೆ ರೀತಿ. ನಿಮ್ಮ ಹೋರಾಟದ ಹಿನ್ನೆಲೆ ಏನು ಅಂತ ಗೊತ್ತು. ನಿಮ್ಮ ಆತ್ಮಾವಲೋಕನ ನೀವೇ ಮಾಡಿಕೊಳ್ಳಿ ಎಂದು ಕಿಡಿಕಾರಿದರು.

ABOUT THE AUTHOR

...view details