ಕರ್ನಾಟಕ

karnataka

ETV Bharat / state

ಮಂಡ್ಯ: ಹಲ್ಲೆ ಬಳಿಕ ಕಾಣೆಯಾಗಿದ್ದ ಯುವಕ ಕೆರೆಯಲ್ಲಿ ಶವವಾಗಿ ಪತ್ತೆ.. ಕೊಲೆ ಶಂಕೆ - ram kumar was found dead in lake

Mandya youth missing ram kumar was found dead in lake: ನಡುರಸ್ತೆಯಲ್ಲಿ ತೀವ್ರ ಹಲ್ಲೆ ನಂತರ ಕಾಣೆಯಾಗಿದ್ದ ಮಂಡ್ಯ ಯುವಕ ರಾಮ್ ಕುಮಾರ್​ ರುದ್ರಾಕ್ಷಿಪುರ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಕೆರೆಯಲ್ಲಿ  ಯುವಕ ಶವ  ಪತ್ತೆ
ಕೆರೆಯಲ್ಲಿ ಯುವಕ ಶವ ಪತ್ತೆ

By ETV Bharat Karnataka Team

Published : Aug 24, 2023, 11:16 AM IST

Updated : Aug 24, 2023, 1:06 PM IST

ಮಂಡ್ಯ:ಮದ್ದೂರು ತಾಲೂಕಿನ ರುದ್ರಾಕ್ಷಿಪುರ ಕೆರೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಯುವಕನ ಶವ ಬುಧವಾರ ಪತ್ತೆಯಾಗಿದೆ. ರಾಮನಗರ ಜಿಲ್ಲೆಯ ಬಿಡದಿ ತಾಲೂಕಿನ ಬೈರಮಂಗಲ ಗ್ರಾಮದ ನಿವಾಸಿ ರಾಮ್ ಕುಮಾರ್​ (23) ಮೃತಪಟ್ಟ ಯುವಕ. ಕಳೆದ ಭಾನುವಾರ ರಾತ್ರಿ ರಾಮ್​ ಕುಮಾರ್ ಕಾಣೆಯಾಗಿರುವ ಬಗ್ಗೆ ಮದ್ದೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರಾಮ್ ಕುಮಾರ್ ಶವ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಪೊಲೀಸ್ ತನಿಖೆಯಿಂದ ಕೊಲೆ ಅಥವಾ ಸಹಜ ಸಾವು ಎಂಬುದು ತಿಳಿದು ಬರಬೇಕಿದೆ.

ಶಂಕೆ ವ್ಯಕ್ತಕ್ಕೆ ಕಾರಣವಾಗಿರುವ ಘಟನೆ ಹಿನ್ನೆಲೆ:ಭಾನುವಾರ ತಡರಾತ್ರಿ ರಾಮ್ ಕುಮಾರ್ ಹಾಗೂ ಆತನ ಸ್ನೇಹಿತರಾದ ಬಸವರಾಜು, ಪ್ರದೀಪ್ ಅವರ ಜೊತೆಯಲ್ಲಿ ಬೈಕ್​ಗಳಲ್ಲಿ ಬಿಡದಿಯಿಂದ ಮಹದೇಶ್ವರ ಬೆಟ್ಟಕ್ಕೆ ಹೋಗುವ ಮಾರ್ಗಮಧ್ಯೆ, ಬೆಂಗಳೂರು - ಮೈಸೂರು ಎಕ್ಸ್​​ಪ್ರೆಸ್​​ ಹೈವೇಯ ರುದ್ರಾಕ್ಷಿಪುರ ಸಮೀಪದ ಕೆರೆ ಬಳಿ ಮೂತ್ರ ವಿಸರ್ಜನೆಗೆ ಬೈಕ್​ಗಳನ್ನು ನಿಲ್ಲಿಸಿದ್ದರು. ಈ ವೇಳೆ, ಏಕಾಏಕಿ 1 ಜೀಪು, 4 ಬೈಕ್​ಗಳಲ್ಲಿ ಬಂದ ದುಷ್ಕರ್ಮಿಗಳ ಗುಂಪೊಂದು ರಾಮ್ ಕುಮಾರ್, ಬಸವರಾಜು ಹಾಗೂ ಪ್ರದೀಪ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದರು.

ಈ ವೇಳೆ, ಬಸವರಾಜು ದುಷ್ಕರ್ಮಿಗಳಿಂದ ರಕ್ಷಣೆಗಾಗಿ ಹೆದ್ದಾರಿ ದಾಟಿ ಪರಾರಿಯಾಗಿದ್ದನು. ಪ್ರದೀಪ್ ಹಾಗೂ ರಾಮ್ ಕುಮಾರ್ ಮೇಲೆ ಹಲ್ಲೆ ನಡೆಸಿ ದುಷ್ಕರ್ಮಿಗಳ ಗುಂಪು ಪರಾರಿಯಾಗಿತ್ತು. ಘಟನೆ ನಂತರ ಹೆದ್ದಾರಿ ಗಸ್ತು ವಾಹನ ಸ್ಥಳಕ್ಕೆ ಭೇಟಿ ನೀಡಿದಾಗ ಗಾಯಗೊಂಡಿದ್ದ ಪ್ರದೀಪ್ ಘಟನೆ ಬಗ್ಗೆ ಪೊಲೀಸರಿಗೆ ಸಂಪೂರ್ಣ ಮಾಹಿತಿ ನೀಡುವ ಜೊತೆಗೆ ರಾಮ್ ಕುಮಾರ್ ಕೆರೆಗೆ ಬಿದ್ದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.

ಆ ಸಂದರ್ಭದಲ್ಲಿ ಕೆರೆ ಬಳಿ ಪರಿಶೀಲನೆ ನಡೆಸಿದಾಗ ಯಾವುದು ಶವ ಕಂಡು ಬಂದಿರಲಿಲ್ಲ. ಆನಂತರ ಪ್ರದೀಪ್ ಅವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಸಂಪೂರ್ಣ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದರು. ಆನಂತರ ನಾಪತ್ತೆಯಾಗಿದ್ದ ರಾಮ್ ಕುಮಾರ್ ಪತ್ತೆಗಾಗಿ ವ್ಯಾಪಕ ಜಾಲ ಬೀಸಿದ್ದರು.

ಈ ಮಧ್ಯೆ ಬುಧವಾರ ಬೆಳಗ್ಗೆ ರಾಮ್ ಕುಮಾರ್ ಅವರ ಶವ ಕೆರೆಯಲ್ಲಿ ಪತ್ತೆಯಾಗಿದೆ. ರಾಮ್ ಕುಮಾರ್ ಕೊಲೆಯಾಗಿರಬಹುದು ಅಥವಾ ಸಹಜ ಸಾವು ಮತ್ತು ಹಲ್ಲೆ ಮಾಡಿದ ಯುವಕರ ತಂಡ ಹೆದ್ದಾರಿಯಲ್ಲಿ ದರೋಡೆ ಮಾಡಲು ಯತ್ನಿಸಿದ್ದರ ಎಂಬುದು ಪೊಲೀಸ್​ ತನಿಖೆಯಿಂದ ತಿಳಿದು ಬರಬೇಕಿದೆ.
ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ‌.

ಇದನ್ನೂ ಓದಿ:ಮಹಿಳೆಯ ಕೊಲೆ ಮಾಡಿ ಶವ ಹೂತು ಹಾಕಿ ಬಂದ ಯುವಕ : ಐದು ತಿಂಗಳ ಬಳಿಕ ಆರೋಪಿ ಅರೆಸ್ಟ್​

Last Updated : Aug 24, 2023, 1:06 PM IST

ABOUT THE AUTHOR

...view details