ಮಂಡ್ಯ: ಜೂನ್ 1ರಂದು ದಿಢೀರ್ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜನರ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಜಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕುಮಾರಸ್ವಾಮಿ (61) ಮೃತರು. ಜಮೀನು ಹಾಗೂ ನಿವೇಶನದ ವಿಚಾರವಾಗಿ ಹಲವು ವರ್ಷಗಳಿಂದ ದಾಯಾದಿಗಳ ನಡುವೆ ಜಗಳ ನಡೆಯುತ್ತಿತ್ತು. ಮೇ 31ರ ರಾತ್ರಿ ಕುಮಾರಸ್ವಾಮಿ ತಂದೆ ಚಿಕ್ಕಹುಚ್ಚೇಗೌಡ ವಯೋಸಹಜವಾಗಿ ಸಾವನ್ನಪ್ಪಿದ್ದರು. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೋದಾಗ ಆತನ ಸಹೋದರರು ಹಾಗೂ ಸಹೋದರಿಯರು ಜಗಳ ತೆಗೆದು ಮುಖ ನೋಡಲು ಬಿಡದೆ ವಾಪಸ್ ಕಳುಹಿಸಿದ್ದರು ಎನ್ನಲಾಗಿದೆ.
ತಂದೆಯ ಅಂತ್ಯಕ್ರಿಯೆಗೆ ತೆರಳಿದ್ದ ವ್ಯಕ್ತಿ ಶವವಾಗಿ ಪತ್ತೆ ಪ್ರಕರಣ ಜೂನ್ 1ರಂದು ಮುಂಜಾನೆ ಕುಮಾರಸ್ವಾಮಿ ನಾಪತ್ತೆಯಾಗಿದ್ದ. ಎಲ್ಲಾ ಕಡೆ ಹುಡುಕಿದರೂ ಆತನ ಸುಳಿವು ಸಿಕ್ಕಿರಲಿಲ್ಲ. ಮಾರನೆ ದಿನ ರಕ್ತಸಿಕ್ತ ಸ್ಥಿತಿಯಲ್ಲಿ ಆತನ ಮನೆಯ ಹಿಂಭಾಗದಲ್ಲೇ ಮೃತದೇಹ ಪತ್ತೆಯಾಗಿದೆ. ಬೇರೆ ಕಡೆ ಕೊಲೆಗೈದಿರುವ ದುಷ್ಕರ್ಮಿಗಳು ಒಂದು ದಿನದ ಬಳಿಕ ಶವವನ್ನು ತಂದು ಮನೆಯ ಹಿಂಭಾಗ ಬಿಸಾಕಿ ಹೋಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.
ಕಿಕ್ಕೇರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ಕುಮಾರಸ್ವಾಮಿ ಮಗ ಹರೀಶ್ ಕುಮಾರ್ ನೀಡಿರುವ ದೂರಿನ ಆಧಾರದ ಮೇಲೆ 9 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಓದಿ:ಮಂಡ್ಯ- ಆಸ್ತಿಗಾಗಿ ಕಲಹ: ದಾಯಾದಿಗಳ ಜಗಳ ಅಣ್ಣನ ಕೊಲೆಯಲ್ಲಿ ಅಂತ್ಯ!