ಮಂಡ್ಯ:ಸ್ನೇಹಿತರನ್ನು ಮಾತನಾಡಿಸಿಕೊಂಡg ಬರುವುದಾಗಿ ಹೇಳಿ ರಾತ್ರಿ ಮನೆಯಿಂದ ಹೋಗಿದ್ದ ವ್ಯಕ್ತಿ ಬೆಳಗಾಗುವಷ್ಟರಲ್ಲಿ ಜಮೀನೊಂದರ ಬಳಿ ಭೀಕರವಾಗಿ ಹತ್ಯೆಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಸಾಗರ್(29) ಭೀಕರವಾಗಿ ಕೊಲೆಯಾದ ವ್ಯಕ್ತಿ. ಈತ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಾರೇಕುರ ಗ್ರಾಮದ ನಿವಾಸಿ. ನಿನ್ನೆ ಮನೆಯಿಂದ ಹೊರಡುವಾಗ ಅರ್ಧ ಗಂಟೆಯಲ್ಲಿ ವಾಪಸ್ ಬರ್ತೀನಿ ಎಂದು ಹೇಳಿದ್ದನಂತೆ. ಅಲ್ಲದೆ, ರಾತ್ರಿ 9 ಗಂಟೆಗೆ ಫೋನ್ ಮಾಡಿ ಚಿಕನ್ ತರುತ್ತೀನಿ ಎಂದು ತಿಳಿಸಿದ್ದನಂತೆ. ಆದರೆ 10 ಗಂಟೆಯಾದ್ರೂ ಮನೆಗೆ ಬಾರದಿದ್ದಾಗ ಹೆಂಡತಿ ಫೋನ್ ಮಾಡಿದ್ದಾರೆ. ಕರೆ ಸ್ವಿಕರಿಸಿರಲಿಲ್ಲ. ಹೇಗೋ ಸ್ನೇಹಿತರೊಂದಿಗೆ ಇದ್ದಾರೆ ಬರುತ್ತಾರೆ ಬಿಡು ಅಂತಾ ಮನೆಯವರು ಸಮ್ಮನಾಗಿದ್ದರು.
ಇತ್ತ ಬೆಳಗ್ಗೆ 9 ಗಂಟೆಯಾದರೂ ಸಾಗರ್ ಮನೆಗೆ ಬರದಿದ್ದಾಗ ಗಾಬರಿಗೊಂಡ ಪೋಷಕರು ಹಾಗೂ ಪತ್ನಿ ಸಾಗರ್ಗಾಗಿ ಹುಡುಕಾಟ ಶುರು ಮಾಡಿದ್ದರು. ಇದೇ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದ ಗೂಡ್ಸ್, ಟೆಂಪೋ ಸವಾರರೊಬ್ಬರು ಜಮೀನಿನಲ್ಲಿ ಸಾಗರ್ ಮೃತದೇಹ ನೋಡಿ ಮನೆಯವರಿಗೆ ವಿಚಾರ ಮುಟ್ಟಿಸಿದ್ದರು. ವಿಚಾರ ತಿಳಿದು ಸ್ಥಳಕ್ಕೆ ಬಂದು ನೋಡಿದ ಗ್ರಾಮಸ್ಥರಿಗೆ ಆತನ ಗುರುತು ಸಿಗದಂತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು.
ದುಷ್ಕರ್ಮಿಗಳು ಸಾಗರ್ ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದರು. ಗ್ರಾಮಸ್ಥರಿಂದ ಮಾಹಿತಿ ಪಡೆದ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಹಳೆ ದ್ವೇಷದಿಂದ ಕೃತ್ಯ ನಡೆಸಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Video: ಗುಂಡ್ಲುಪೇಟೆಯಲ್ಲಿ ಬಿಳಿಕಲ್ಲು ಕ್ವಾರಿ ಕುಸಿತ: ಐವರ ರಕ್ಷಣೆ, ಮಣ್ಣಿನಡಿ ಸಿಲುಕಿರುವುದೇ ಅನುಮಾನ ಎಂದ ಡಿಸಿ