ಮಂಡ್ಯ :ಸಂಸದೆ ಸುಮಲತಾ ಅಂಬರೀಶ್ ಅವರ ಬುದ್ಧಿ ಏನು ಎಂದು ಗೊತ್ತಿದೆ. ನಾವು ಏನು ಮಾತನಾಡಿದ್ರೂ ಸುಮಲತಾ ಬಂಡವಾಳ ಮಾಡಿಕೊಳ್ಳುತ್ತಾರೆ. ಕಿತಾಪತಿ-ಜಗಳ ಮಾಡಲೆಂದೇ ಬರುತ್ತಾರೆ. ಅದಕ್ಕೆ ನಾವು ಮಾತನಾಡದೆ ಸುಮ್ಮನಿದ್ದೀವಿ ಎಂದು ನಾಗಮಂಗಲ ಶಾಸಕ ಸುರೇಶಗೌಡ ಲೇವಡಿ ಮಾಡಿದ್ದಾರೆ.
ಶಾಸಕರ ಕೆಲಸವನ್ನೂ ನಾನೇ ಮಾಡುತ್ತಿರುವುದಾಗಿ ಹೇಳಿದ್ದ ಸುಮಲತಾ ಅವರಿಗೆ ಡಿ ಸಿ ತಮ್ಮಣ್ಣ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಸುರೇಶ್ ಗೌಡ ಕೂಡ ಸಂಸದೆ ವಿರುದ್ಧ ಕಿಡಿಕಾರಿದ್ದಾರೆ. ಬಹಿರಂಗ ಚರ್ಚೆಗೆ ಬರುವಂತೆ ತಮ್ಮಣ್ಣ ಆಹ್ವಾನ ನೀಡಿದ್ದು, ಇದೀಗ ಸುರೇಶ್ ಗೌಡರು, ಸುಮಲತಾ ಅವರೀಗ ಎಲ್ಲಿದ್ದಾರೆ? ಮಂಡ್ಯ ಮನೆಯಲ್ಲಿದ್ದಾರಾ? ಗುದ್ದಲಿ ಪೂಜೆಗಳಿಗೆ ಕರೆಯಲು ನಾನು ಅವರನ್ನೀಗ ಹುಡುಕಾಡುತ್ತಿರುವುದಾಗಿ ವ್ಯಂಗ್ಯವಾಡಿದ್ದಾರೆ.
ಸುಮಲತಾ ಅವರ ಪ್ರಕಾರ ನಾವು ಯಾವ ಶಾಸಕರೂ ಕ್ಷೇತ್ರದಲ್ಲಿ ಇಲ್ಲ. ನಾವು ನಿಷ್ಪ್ರಯೋಜಕರು, ಕ್ಷೇತ್ರಕ್ಕೆ ಯಾವ ಅನುದಾನವನ್ನೂ ತಂದಿಲ್ಲ, ಬಹಳ ಸಂತೋಷ. ಈ ಕುರಿತು ಇನ್ನೊಂದು ವರ್ಷದ ಬಳಿಕ ಜನರೇ ಉತ್ತರಿಸುತ್ತಾರೆ ಎಂದ ಸುರೇಶ್ ಗೌಡ, ಸಂಸದರು ನಮಗೇ ಸಿಗ್ತಿಲ್ಲ, ಇನ್ನು ಜನಸಾಮಾನ್ಯರಿಗೆ ಹೇಗೆ ಸಿಗ್ತಾರೆ? ಎಂದು ಹೇಳಿದ್ದಾರೆ.
ಅವರು ಅವರ ಅಧಿಕಾರ ವ್ಯಾಪ್ತಿ ಅರ್ಥ ಮಾಡ್ಕೊಂಡರೆ ಬಹಳ ಒಳ್ಳೆಯದು. ಇಲ್ಲದಿದ್ದರೆ ಗೊಂದಲಕ್ಕೆ ಕಾರಣವಾಗುತ್ತೆ. ನಾನು ಒಬ್ಬ ಹೆಣ್ಣು ಮಗಳು, ಸೋದರಿ ಭಾವನೆಯಿಂದ ಸುಮ್ಮನಿದ್ದೇವೆ. ಇವರ ವಿರುದ್ಧ ನಾವು ಅಸೆಂಬ್ಲಿಯಲ್ಲಿ ಧ್ವನಿ ಎತ್ತಬಹುದು. ಬೇರೆಲ್ಲ ಎಂಪಿ ಹೇಗಿದ್ದಾರೆ? ಇವರು ಈ ರೀತಿ ಮಾಡುತ್ತಾರೆ. ನಾವು ಏನು ಮಾತನಾಡಿದರೂ ನಮ್ಮದೇ ತಪ್ಪು ಅಂತಾ ಬಂಡವಾಳ ಮಾಡಿಕೊಳ್ಳುತ್ತಾರೆ. ಈ ಬಗ್ಗೆ ನಮ್ಮ ಕ್ಷೇತ್ರದ ಜನರೇ ಮುಂದೆ ಉತ್ತರ ಕೊಡ್ತಾರೆ ಎಂದು ಹೇಳಿದ್ದಾರೆ.