ಗ್ರಾಮ ಪಂಚಾಯತ್ ಅಭ್ಯರ್ಥಿಗಳಿಗೆ ಎಲ್ಇಡಿ ಟಿವಿ ಹಂಚಿ ಸನ್ಮಾನಿಸಿದ ಸಚಿವ ಕೆ ಸಿ ನಾರಾಯಣ ಗೌಡ ಮಂಡ್ಯ:ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರಾಜಕೀಯ ಮುಖಂಡರು ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಗಿಫ್ಟ್ ಪಾಲಿಟಿಕ್ಸ್ ನಡೆಸುತ್ತಿದ್ದಾರೆ. ಇಂತಹ ಗಿಫ್ಟ್ ಪಾಲಿಟಿಕ್ಸ್ ಮಂಡ್ಯದಲ್ಲಿಯೂ ಶುರುವಾಗಿದೆ. ಸ್ವತಃ ಸಚಿವ ಕೆ.ಸಿ ನಾರಾಯಣಗೌಡ ಅವರೇ ತಮ್ಮ ಕ್ಷೇತ್ರವನ್ನು ಭದ್ರ ಮಾಡಿಕೊಳ್ಳೋದಕ್ಕಾಗಿ ಮಂಡ್ಯದಲ್ಲಿ ಜನತೆಗೆ ಕೆಲವು ಕೊಡುಗೆಗಳನ್ನು ಕೊಟ್ಟಿದ್ದಾರೆ.
ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ಕ್ಷೇತ್ರದಲ್ಲಿ ಕ್ರೀಡಾ ಮತ್ತು ಯುವಜನ ಸಬಲೀಕರಣ ಹಾಗೂ ರೇಷ್ಮೆ ಸಚಿವರಾಗಿರುವಂತ ಕೆ.ಸಿ ನಾರಾಯಣ ಗೌಡ ಅವರು, ತಮ್ಮ ಕ್ಷೇತ್ರವನ್ನು ಭದ್ರ ಮಾಡಿಕೊಳ್ಳೋದಕ್ಕಾಗಿ, ಗ್ರಾಮಗಳ ಮುಖಂಡರನ್ನು ಹಿಡಿದಿಟ್ಟುಕೊಳ್ಳಲು ಗ್ರಾಮ ಪಂಚಾಯ್ತಿ ಸದಸ್ಯರಿಗೆ 32 ಇಂಚಿನ ಎಲ್ಇಡಿ ಟಿವಿಗಳನ್ನು ಉಡುಗೊರೆ ಕೊಟ್ಟಿದ್ದಾರೆ. ಕಳೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ಗೆಲುವು ಸಾಧಿಸಿದ್ದಂತ ಗ್ರಾಮ ಪಂಚಾಯ್ತಿ ಸದಸ್ಯರು ಸೇರಿದಂತೆ ಪಕ್ಷದ ಮುಖಂಡರಿಗೆ 500ಕ್ಕೂ ಹೆಚ್ಚು ಎಲ್ಇಡಿ ಟಿವಿಯನ್ನು ನೀಡಿದ್ದಾರೆ.
ಸಚಿವ ಕೆ ಸಿ ನಾರಾಯಣಗೌಡ ಅವರು ನೀಡುತ್ತಿರುವಂತ ಉಚಿತ ಎಲ್ಇಡಿ ಟಿವಿಯ ಸುದ್ದಿ ತಿಳಿದ ಬಿಜೆಪಿಯ ಮುಖಂಡರು ಸೇರಿದಂತೆ, ಗ್ರಾಮ ಪಂಚಾಯ್ತಿ ಸದಸ್ಯರು ನಾ ಮುಂದು, ತಾ ಮುಂದು ಎನ್ನುವಂತೆ ಮುಗಿ ಬಿದ್ದಿದ್ದಾರೆ. ಅಂದ ಹಾಗೇ ಸಚಿವ ಕೆ ಸಿ ನಾರಾಯಣ ಗೌಡ ಅವರು ಮುಂಬರುವ ಚುನಾವಣೆ ದೃಷ್ಠಿಯಿಂದ ನೀಡಿರುವಂತ 32 ಇಂಚಿನ ಎಲ್ಇಡಿ ಟಿವಿ ಆನ್ ಮಾಡಿದರೆ ಸರ್ಕಾರದ ಸಾಧನೆಗಳು ಬರುವಂತೆ ಮಾಡಿದ್ದಾರೆ.
ಈ ಬಗ್ಗೆ ಸಚಿವರು ಹೇಳುವುದೇನು?:ಈ ಬಗ್ಗೆ ಸ್ವತಃ ಸಚಿವ ಕೆ.ಸಿ ನಾರಾಯಣ ಗೌಡ ಅವರೇ ಪ್ರತಿಕ್ರಿಯೆ ನೀಡಿ, ’’ಗ್ರಾಮ ಪಂಚಾಯತ್ನಲ್ಲಿ ಗೆದ್ದ ಮತ್ತು ಸೋತ ಅಭ್ಯರ್ಥಿಗಳಿಗೆ ಪಕ್ಷದ ಕಡೆಯಿಂದ ನಾನು ಅಭಿನಂದನೆ ಸಲ್ಲಿಸಿ ಸನ್ಮಾನ ಮಾಡಿದ್ದೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೊಡುಗೆಗಳ ಬಗ್ಗೆ ಜನರಿಗೆ ತಿಳಿಸುವ ಅಗತ್ಯ ಇದೆ. ಹೀಗಾಗಿ ಸಭೆ ನಡೆಸಿ ತಿಳಿಸುವ ಕಾರ್ಯ ಮಾಡಿದ್ದೇವೆ’’ ಎಂದರು.
ಮುಂದಿನ ಚುನಾವಣೆಯನ್ನು ಎದುರಿಸಲು ಹೇಗೆ ಸಿದ್ಧರಾಗಿದ್ದೀರಿ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆ ಬಗ್ಗೆ ಜನರಿಗೆ ತಲುಪಿಸುವ ಕಾರ್ಯ ಮಾಡಲಾಗುತ್ತದೆ. ಅಲ್ಲದೇ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಜನರಿಗೆ ತಿಳಿಸುವ ಕಾರ್ಯ ಮಾಡಲಾಗುವುದು. ಬೂತ್ ವಿಜಯ್ ಅಭಿಯಾನದ ಮೂಲಕ ಮನೆ ಮನೆಗೆ ತಲುಪುವ ಕಾರ್ಯ ಆಗಿದೆ ಎಂದು ತಿಳಿಸಿದರು.
ಈಗಾಗಲೇ ರಾಜ್ಯದಲ್ಲಿ ಜನ ಸಂಕಲ್ಪ ಯಾತ್ರೆ ನಡೆಯುತ್ತಿದ್ದು, ಬೂತ್ ವಿಜಯ್ ಅಭಿಯಾನ, ವಿಜಯ ಸಂಕಲ್ಪ ಅಭಿಯಾನದ ಫಲಿತಾಂಶದ ಅವಲೋಕನ ಮಾಡಲಾಗಿದೆ. ಬೂತ್ಗಳ ಸ್ಥಿತಿಗತಿ ಪರಾಮರ್ಶೆಯಾಗಿದ್ದು, ಪ್ರಮುಖರ ಕಾರ್ಯನಿರ್ವಹಣೆ, ಬೂತ್ಗಳಲ್ಲಿ ಸಂಘಟನೆ ಗುರಿ ತಲುಪಿದೆಯಾ ಎನ್ನುವುದು ಸೇರಿದಂತೆ ತಳಮಟ್ಟದಿಂದ ಪಕ್ಷ ಬಲವರ್ಧನೆ ಕುರಿತು ಪರಾಮರ್ಶೆ ಆಗಿದೆ. ಹಾಗೇ ರಾಜ್ಯದ ನಾಲ್ಕು ದಿಕ್ಕಿನಿಂದ ರಥಯಾತ್ರೆಗೆ ಸಿದ್ಧತೆಯೂ ನಡೆಯುತ್ತಿದೆ. ಇದರಲ್ಲಿ ಸ್ಥಳೀಯವಾಗಿ ನಾವು ಮಾಡಿರುವ ಕಾರ್ಯಗಳ ಬಗ್ಗೆ ಜನರಿಗೆ ತಲಯುಪಿಸಲಾಗುವುದು ಎಂದು ಕೆ.ಸಿ ನಾರಾಯಣಗೌಡ ಹೇಳಿದರು.
ಇದನ್ನೂ ಓದಿ:ನನ್ನವರು ನನಗೆ ಮೋಸ ಮಾಡಿದ್ರು, ರೆಡ್ಡಿ ಸಿಎಂ ಆಗುವನೆಂದು ಜೈಲಿನಲ್ಲಿಟ್ಟರು: ಗಾಲಿ ಜನಾರ್ದನ ರೆಡ್ಡಿ