ಮಂಡ್ಯ : ಇಂಡಿಯಾ ಅಂದ್ರೆ ಕಾಂಗ್ರೆಸ್, ಕಾಂಗ್ರೆಸ್ ಅಂದ್ರೆ ಇಂಡಿಯಾ. ತೆಲಂಗಾಣ ಗೆದ್ದಿದ್ದೇವೆ, ನಾಲ್ಕು ರಾಜ್ಯ ಗೆದ್ದಾಗೆ. ಸೌತ್ ಇಂಡಿಯಾದಲ್ಲಿ ಮತದಾರರು ಬಿಜೆಪಿ ಮುಕ್ತ ಮಾಡಿದ್ದಾರೆ ಎಂದು ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯದಲ್ಲಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಪ್ರತಿಕ್ರಿಯಿಸಿದ್ದಾರೆ.
ಕೇಂದ್ರದ ಬಿಜೆಪಿಯವರು 10 ವರ್ಷಗಳಿಂದ ಆಡಳಿತ ಮಾಡ್ತಿದ್ದಾರೆ. ಇದು ಇಂಡಿಯಾ ಅಂದ್ರೆ ಕಾಂಗ್ರೆಸ್, ಕಾಂಗ್ರೆಸ್ ಅಂದ್ರೆ ಇಂಡಿಯಾ. ಸ್ವಾತಂತ್ರ್ಯ ತರಲು ಹೋರಾಟ ಮಾಡಿದ್ದು ಮೂಲತಃ ಕಾಂಗ್ರೆಸ್ ನಾಯಕರು. ಮಹಾತ್ಮಗಾಂಧಿ ಅವರಿಂದ ಹಿಡಿದು ಅನೇಕ ನಾಯಕರು. ಕಾಂಗ್ರೆಸ್ ಬಗ್ಗೆ ಲಘುವಾಗಿ ಮಾತನಾಡಿದ್ದು ಸರಿಯಲ್ಲ. ಕಾಂಗ್ರೆಸ್ ಮುಕ್ತ ಇಂಡಿಯಾ ಮಾಡ್ತಿನಿ ಅಂದಿದ್ರು, ಸೌತ್ ಇಂಡಿಯಾದಲ್ಲಿ ಬಿಜೆಪಿ ಮುಕ್ತ ಮಾಡಿದ್ದಾರೆ. ಕೇರಳ, ತಮಿಳುನಾಡು, ಕರ್ನಾಟಕ, ತೆಲಂಗಾಣದಲ್ಲಿ ಬಿಜೆಪಿಯೇತರ ಸರ್ಕಾರ ರಚನೆಯಾಗಿದೆ ಎಂದು ಟಾಂಗ್ ಕೊಟ್ಟರು.
10 ವರ್ಷ ತೆಲಂಗಾಣದಲ್ಲಿ ಗ್ಯಾಪ್ ಇತ್ತು. ಇವತ್ತು ಜನರು ಒಂದು ತೀರ್ಮಾನ ತೆಗೆದುಕೊಂಡಿದ್ದಾರೆ. ಮುಂದಿನ ಚುನಾವಣೆಗೆ ಕಾಂಗ್ರೆಸ್ಗೆ ಭವಿಷ್ಯ ಇದೆ. ತೆಲಂಗಾಣ ಮತದಾರರು ಇವತ್ತು ತೋರಿಸಿದ್ದಾರೆ. ತೆಲಂಗಾಣ ಮತದಾರರಿಗೆ ಧನ್ಯವಾದ ಹೇಳುತ್ತೇನೆ ಎಂದು ಹೇಳಿದರು.
ಹೆಚ್ಡಿಕೆ ಲಂಚನೂ ತೆಗೆದುಕೊಂಡಿಲ್ಲ: ಕಾಂಗ್ರೆಸ್ ಹಣದಿಂದ ತೆಲಂಗಾಣ ಚುನಾವಣೆ ಗೆಲುವು ಎಂಬ ಹೆಚ್ಡಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪಾಪ ಅವರು ಹೇಳಲೇಬೇಕು. ನಾನು ಅವರ ಜೊತೆ ಕೆಲಸ ಮಾಡಿದ್ದೇನೆ. ಅವರು ಹೇಳುವುದೆಲ್ಲ ಸತ್ಯ. ಅವರು ಒಂದು ರೂಪಾಯಿಯನ್ನು ಬೇರೆ ದುಡ್ಡು ನೋಡಿಲ್ಲ. ಅವರ ಜೀವನ ಪೂರ್ತಿ ಅಲ್ಲಿ ಇಲ್ಲಿ ಕಷ್ಟಪಟ್ಟು ಕೂಲಿ ಮಾಡಿ ರಾಜಕಾರಣ ಮಾಡಿದ್ದಾರೆ. ಅವರಿಗೆ ಧನ್ಯವಾದ ಹೇಳ್ತೇನೆ. ಅವರ ಬಗ್ಗೆ ಹೆಚ್ಚು ಮಾತನಾಡಲ್ಲ. ಕುಮಾರಸ್ವಾಮಿ ಮಾತ್ರ ಒಂದು ರೂಪಾಯಿ ಸಹ ದುರುಪಯೋಗ ಮಾಡ್ಕೊಂಡಿಲ್ಲ. ಅವರು ಲಂಚನೂ ತೆಗೆದುಕೊಂಡಿಲ್ಲ, ಯಾರ ಬಳಿ ಸಹಾಯ ಕೂಡ ತೆಗೆದುಕೊಂಡಿಲ್ಲ. ದಾನ ಕೂಡ ಕುಮಾರಸ್ವಾಮಿ ತೆಗೆದುಕೊಂಡಿಲ್ಲ. ಅವರ ಸ್ವಂತ ದುಡ್ಡಿನಲ್ಲಿ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ ಎಂದು ಮಾಜಿ ಸಿಎಂ ಹೆಚ್ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.
ತೆಲಂಗಾಣದಲ್ಲಿ ಮತದಾರರು ಕೈ ಹಿಡಿದಿದ್ದಾರೆ: ಮೋದಿ ಹೆಸರಿಗೆ ಇನ್ನು ಮಹತ್ವ ಇದೆ ಎಂಬ ಆರ್ ಅಶೋಕ್ ಹೇಳಿಕೆ ವಿಚಾರವಾಗಿ, ಮೋದಿಗೆ ಮಹತ್ವ ಇಲ್ಲ, ಕಡಿಮೆಯಾಗಿದೆ. ಅಶೋಕ್ ಪಾಪ ಹೇಳಲೇಬೇಕು. ಅಶೋಕ್ನನ್ನ ವಿರೋಧ ಪಕ್ಷದ ನಾಯಕನ ಮಾಡಿ ಕೂರಿಸಿದ್ದಾರೆ. ಮೋದಿ ಪರ ಹೇಳಬೇಕು, ಪಾಪ ರಾಹುಲ್ ಗಾಂಧಿ ಪರ ಹೇಳ್ತಾರಾ?. ಮೋದಿಗೆ ಡೌನ್ ಫಾಲ್ ಸ್ಟಾರ್ಟ್ ಆಗಿದೆ. ರಾಜಸ್ಥಾನ ಕಳೆದುಕೊಂಡಿದ್ದೇವೆ. 20 ವರ್ಷ ಇಲ್ಲದನ್ನ ತೆಗೆದುಕೊಂಡಿದ್ದೇವೆ. ಹಿಂದೆ ಸಿದ್ದರಾಮಯ್ಯ ಒಳ್ಳೆಯ ಕೆಲಸ ಮಾಡಿದರೂ ಸರ್ಕಾರ ಕಳೆದುಕೊಂಡಿದ್ವಿ. ಕೆಲವೊಮ್ಮೆ ಜನ ಬದಲಾವಣೆ ಬಯಸುವುದನ್ನ ನಾವು ನೋಡಬೇಕು. ತೆಲಂಗಾಣದಲ್ಲಿ ಮತದಾರರು ಕೈ ಹಿಡಿದಿದ್ದಾರೆ. ಧನ್ಯವಾದ ತಿಳಿಸುತ್ತೇನೆ. ಮುಂದಿನ ಭವಿಷ್ಯ ಕಾಂಗ್ರೆಸ್. ದಿಕ್ಸೂಚಿಯೂ ಆಗುತ್ತೆ, ಜನರು ಬದಲಾವಣೆಯನ್ನೂ ಬಯಸಿದ್ದಾರೆ. ಕಾಂಗ್ರೆಸ್ಗೆ ಪಾರ್ಲಿಮೆಂಟ್ನಲ್ಲಿ ಒಳ್ಳೆಯದಾಗುತ್ತೆ ಎಂದು ಹೇಳಿದರು.
ನಾವು ರೈತರ ಪರವಾಗಿಯೇ ಇದ್ದೀವಿ: ಜೆಡಿಎಸ್-ಬಿಜೆಪಿಯವರು ವರ್ಗಾವಣೆ ದಂಧೆ ಮಾಡಿಲ್ಲ. ಅವರಿಗೆ ಏನು ಗೊತ್ತೇ ಇಲ್ಲ. ನಾವೇ ಎಲ್ಲಾ ಮಾಡಿರೋದು ಎಂದು ಬಿಜೆಪಿ ವಿರುದ್ಧ ಮಂಡ್ಯದಲ್ಲಿ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಇಂದು ಕೃಷಿ ಮೇಳ ಹಾಗೂ ಖಾಸಗಿ ಕಾರ್ಯಕ್ರಮ ಇದ್ದರಿಂದ ಸೆಷನ್‌ಗೆ ಹೋಗಲು ಆಗಿಲ್ಲ. ಇಬ್ಬರು ಸ್ಪೀಕರ್ಗಳಿಗೂ ಇದರ ಬಗ್ಗೆ ಹೇಳಿದ್ದೇನೆ. ನಾಳೆ ನಾನು ಸೆಷನ್‌ನಲ್ಲಿ ಭಾಗಿಯಾಗುತ್ತೇನೆ. ಬಿಜೆಪಿ ಜೆಡಿಎಸ್ ಸೆಷನ್‌ನಲ್ಲಿ ಕೇಳಲು ಏನು ಇಲ್ಲ. ನಮ್ಮ ಕೆಲಸ ನಾವು ಚೆನ್ನಾಗಿ ಮಾಡ್ತಾ ಇದೀವಿ. ವಿರೋಧ ಪಕ್ಷದ ಕೆಲಸವನ್ನು ಅವರು ಮಾಡಲಿ. ಆದ್ರೆ ಫೈಟ್ ಮಾಡಲು ಏನು ಇಲ್ಲ. ಈಗ ನಾವು ಬರ ಪರಿಹಾರದ ಮೊದಲ ಕಂತು ಬಿಡುಗಡೆ ಮಾಡಿದ್ದೇವೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕಿತ್ತು, ಇನ್ನೂ ಮಾಡಿಲ್ಲ. ಕನಿಷ್ಠ ಘೋಷಣೆಯನ್ನೂ ಇನ್ನೂ ಕೇಂದ್ರ ಮಾಡಿಲ್ಲ. ಕಾವೇರಿ ವಿಚಾರದಲ್ಲಿ ನಾವು ರೈತರ ಪರವಾಗಿಯೇ ಇದ್ದೀವಿ. ವಿರೋಧ ಪಕ್ಷಗಳು ಈ ವಿಚಾರದಲ್ಲಿ ರಾಜಕೀಯ ಮಾಡ್ತಾ ಇವೆ ಎಂದರು.
ಸರ್ಕಾರ ಟೇಕ್ ಆಫ್ ಆಗಿಲ್ಲ ಎಂಬ ಅಶೋಕ್ ಹೇಳಿಕೆ ವಿಚಾರ, ಮೊದಲು ಅಶೋಕ್ ಟೇಕ್ ಆಫ್ ಆಗಿದ್ದಾರಾ ಕೇಳಬೇಕು. ಆರು ತಿಂಗಳು ಆಯ್ತು ವಿರೋಧ ಪಕ್ಷದ ನಾಯಕನನ್ನು ನೇಮಿಸೋಕೆ. ಮೊದಲ ಸದನ ಎದುರಿಸುತ್ತಿದ್ದಾರೆ. ಮುಗಿದ ಬಳಿಕ ಅದರ ಬಗ್ಗೆ ಅವರೆ ಹೇಳಲಿ. ನಾವು ರೈತರಾಗಿದ್ದೇವೆ. ಅಭಿವೃದ್ಧಿ ಕೆಲಸ ಮಾಡ್ತಾ ಇದೀವಿ. ಸುಮ್ಮನೆ ಬಿಜೆಪಿ ಜೆಡಿಎಸ್ ಅವರು ಏನ್ ಏನೋ ಹೇಳ್ತಾರೆ. ನಮ್ಮನ್ನ ಅವರು ಕಟ್ಟಾಕೋಕೆ ಸಾಧ್ಯವಿಲ್ಲ. ಪಾಪ ಜೆಡಿಎಸ್, ಬಿಜೆಪಿಯವರು ವರ್ಗಾವಣೆ ದಂಧೆ ಮಾಡಿಲ್ಲ. ಅವರಿಗೆ ಏನು ಗೊತ್ತೇ ಇಲ್ಲ, ನಾವೇ ಎಲ್ಲಾ ಮಾಡಿರೋದು ಎಂದು ಹೇಳಿದರು.
ಇದನ್ನೂ ಓದಿ :ಬಿಜೆಪಿಗೆ BSY ಅನಿವಾರ್ಯ, ಆದರೆ ವಿಜಯೇಂದ್ರ ಯಶಸ್ವಿಯಾಗೋದು ಕಷ್ಟ: ಸಚಿವ ಚಲುವರಾಯಸ್ವಾಮಿ