ಕರ್ನಾಟಕ

karnataka

ಬರ ಅಧ್ಯಯನ ಬಗ್ಗೆ ಸಚಿವ ಚಲುವರಾಯಸ್ವಾಮಿ ವ್ಯಂಗ್ಯ: ಸಚಿವರಿಗೆ ತಿರುಗೇಟು ಕೊಟ್ಟ ಜೆಡಿಎಸ್ ಶಾಸಕ

By ETV Bharat Karnataka Team

Published : Nov 11, 2023, 11:02 PM IST

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ನೇಮಕಗೊಂಡ ಹಿನ್ನೆಲೆ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ ಜೋರಾಗಿತ್ತು. ಆದರೆ, ಮತ್ತೊಂದೆಡೆ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಹಾಗೂ ಬರ ಅಧ್ಯಯನ ನಡೆಸುತ್ತಿರುವ ಬಿಜೆಪಿ - ಜೆಡಿಎಸ್ ಬಗ್ಗೆ ಸಚಿವ ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.

Minister Chaluvarayaswamy sarcasm on drought study
Minister Chaluvarayaswamy sarcasm on drought study

ಸಚಿವ ಚಲುವರಾಯಸ್ವಾಮಿ ಮತ್ತು ಜೆಡಿಎಸ್​ನ ಮಾಜಿ ಶಾಸಕ ಸುರೇಶ್ ಗೌಡ ವಾಗ್ಯದ್ಧ

ಮಂಡ್ಯ: ಯಡಿಯೂರಪ್ಪ ಬಿಟ್ಟಾಗಲೇ ಬಿಜೆಪಿ ಪಕ್ಷ ಬಲ ಕಳೆದುಕೊಂಡಿದೆ ಎಂದು ಸಚಿವ ಎನ್ ಚಲುವರಾಯಸ್ವಾಮಿ ವ್ಯಂಗ್ಯವಾಡಿದರು. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ನೇಮಕಗೊಂಡ ವಿಚಾರವಾಗಿ ನಾಗಮಂಗಲದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಬಿಜೆಪಿ ಪಕ್ಷದ ಮಡಿಕೆ ಒಡೆದು ಹೋಗಿದೆ. ಒಡೆದ ಮಡಿಕೆಗೆ ಎಷ್ಟು ನೀರು ತುಂಬಿದ್ರು ನೀರು ನಿಲ್ಲಲ್ಲ. ವಿಜಯೇಂದ್ರ ಒಳ್ಳೆಯವನು, ಅವನ ಬಗ್ಗೆ ನನಗೆ ಗೌರವವಿದೆ, ಯಡಿಯೂರಪ್ಪ ಬಗ್ಗೆಯು ಗೌರವವಿದೆ. ಆದರೆ, ಯಡಿಯೂರಪ್ಪ ಅವರನ್ನು ತೆಗೆದು ಹಾಕಿದು ದಿನವೇ ಬಿಜೆಪಿ ಮಡಿಕೆ ಒಡೆದು ಹೋಯ್ತು. ವಿಜಯೇಂದ್ರ ಅವರನ್ನು ಮಂತ್ರಿ ಮಾಡಿ ಅಂದಾಗ ಮಾಡಲಿಲ್ಲ. ಪರಿಸ್ಥಿತಿ ಗೊತ್ತಾಗಿ ಇವಾಗ ಅದನ್ನ ಪ್ಯಾಚಪ್​​ ಮಾಡೋಕೆ ಹೋಗಿದ್ದಾರೆ. ಹಿಂದೆ ಯಡಿಯೂರಪ್ಪ ಇದ್ದಾಗ ಬಿಜೆಪಿಗೆ ಇದ್ದ ಶಕ್ತಿ ಮತ್ತೆ ಯಾವುದೇ ಕಾರಣಕ್ಕೂ ಬರುವುದಿಲ್ಲ. ಯಡಿಯೂರಪ್ಪ ಇದ್ದಾಗಲೇ ಬಿಜೆಪಿ 115 ದಾಟಿಲ್ಲ. ಈಗ ದಾಟುತ್ತಾ? ಆ ಶಕ್ತಿ ಮತ್ತೆ ಯಾವುತ್ತೂ ಬರುವುದಿಲ್ಲ ಎಂದು ವ್ಯಂಗ್ಯವಾಡಿದರು.

ಬಿಜೆಪಿಯ ವಂಶ ರಾಜಕಾರಣ ವಿಚಾರಕ್ಕೆ, ಎಲ್ಲ ಪಕ್ಷದಲ್ಲಿಯೂ ಕುಟುಂಬ ರಾಜಕಾರಣ ಇದ್ದದ್ದೆ. ಕುಮಾರಸ್ವಾಮಿ ವಂಶ ರಾಜಕಾರಣ ಮಾಡ್ತಿಲ್ವ? ಎಲ್ಲ ಪಾರ್ಟಿಯಲ್ಲಿ ಇದ್ದೇ ಇರುತ್ತೆ. ಬಿಜೆಪಿ ಪಾರ್ಲಿಮೆಂಟ್ ಎಲೆಕ್ಷನ್​ನಲ್ಲಿ ರೀಚ್ ಆಗೋಕೆ ಆಗಲ್ಲ. ಈ ಸಲ ಬಿಜೆಪಿ ಸಂಸದರು ರಾಜ್ಯದಲ್ಲಿ 10ಕ್ಕಿಂತಲು ಕಡಿಮೆ ಆಗ್ತಾರೆ ಎಂದರು.

ಬಿಜೆಪಿ-ಜೆಡಿಎಸ್ ಬರ ಅಧ್ಯಯನ ಬಗ್ಗೆ ಪ್ರತಿಕ್ರಿಯಿಸಿ, ಇದು ನಾಟಕೀಯ. ಬಿಜೆಪಿ-ಜೆಡಿಎಸ್‌‌ನವರಿಗೆ ಜನರ ಬಳಿ ಹೋಗಿ ಸಮಸ್ಯೆ ಕೇಳುವ ಯೋಗ್ಯತೆ ಇಲ್ಲ. ಪ್ರತಿ ಪಕ್ಷದ ಅಧ್ಯಕ್ಷರನ್ನೇ ಇನ್ನೂ ಮಾಡಿಲ್ಲ. ಕಷ್ಟಪಟ್ಟು ನಿನ್ನೆಯಷ್ಟೆ ರಾಜ್ಯಾಧ್ಯಕ್ಷರ ನೇಮಕ ಮಾಡಿದ್ದಾರೆ. ಮೊದಲು ಪ್ರತಿ ಪಕ್ಷದ ನಾಯಕನನ್ನು ಆಯ್ಕೆ ಮಾಡಿ. ಆಮೇಲೆ ನಾವು ಕೊಟ್ಟ ಕಾರ್ಯಕ್ರಮಗಳು ರೈತರಿಗೆ ತಲುಪಿದೆಯಾ ಇಲ್ಲವಾ ಎಂಬುದನ್ನು ಅಧ್ಯಯನ ಮಾಡಲಿ ಎಂದು ವ್ಯಂಗ್ಯವಾಡಿದರು.

ಇನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ನೇಮಕಗೊಂಡ ಹಿನ್ನೆಲೆ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ ಜೋರಾಗಿತ್ತು. ಜಿಲ್ಲಾ ಬಿಜೆಪಿ ವತಿಯಿಂದ ವಿಜಯೇಂದ್ರ ಭಾವಚಿತ್ರಕ್ಕೆ ಈಡುಗಾಯಿ ಒಡೆದು, ಹಾಲಿನ ಅಭಿಷೇಕ ಮಾಡಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು. ಸಂಜಯ್ ಸರ್ಕಲ್​ನಲ್ಲಿ ವಿಜಯೇಂದ್ರ ಪರ ಘೋಷಣೆ ಕೂಗಲಾಯಿತು. ಸಿಎಂ ಸಿದ್ದರಾಮಯ್ಯ ಹಿಂದೆ ಭುಜ ತಟ್ಟಿ ಮಾತಾಡ್ತಿದ್ರು, ನಾವು ಇದೀಗ ತೊಡೆ ತಟ್ಟಿ ಸವಾಲು ಹಾಕ್ತೀವಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28ಕ್ಕೆ 28 ಕ್ಷೇತ್ರದಲ್ಲಿ ಬಿಜೆಪಿ ವಿಜಯೇಂದ್ರ ನೇತೃತ್ವದಲ್ಲಿ ಗೆಲ್ಲುತ್ತೆ. ವಿಜಯೇಂದ್ರ ಅವರ ರಾಜಕೀಯ ಭವಿಷ್ಯ ಮತಷ್ಟು ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಬಿಜೆಪಿ ಕಾರ್ಯಕರ್ತ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರ ಇನ್ನು ಟೇಕ್​ ಆಫ್ ಆಗಿಲ್ಲ ಎಂದು ನಾಗಮಂಗಲದ ಜೆಡಿಎಸ್​ನ ಮಾಜಿ ಶಾಸಕ ಸುರೇಶ್ ಗೌಡ ಆರೋಪಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳಾದರೂ ಇನ್ನು ಸಿದ್ದರಾಮಯ್ಯ ಟೇಕ್​ ಆಫ್ ಆಗಿಲ್ಲ. ಚೀಪ್ ಪಾಪ್ಯುಲಾರಿಟಿ ಸ್ಕೀಮ್ ಮಾಡಿಕೊಂಡು ಅದರ ಸುಳಿಯಲ್ಲಿ ಒದ್ದಾಡುತ್ತಿದ್ದಾರೆ. ಸಿದ್ದರಾಮಯ್ಯ ಒಳ್ಳೆಯ ಆಡಳಿತಗಾರ ಅಂತ ಹೆಸರು ತೆಗೆದುಕೊಂಡಿದ್ದಾರೆ.

ಆದರೆ ಗೊತ್ತಿದ್ದು ಗೊತ್ತಿದ್ದು ಈ ಕೂಪಕ್ಕೆ ಬಿದ್ದಿದ್ದಾರೆ. ಈ ರಾಜ್ಯವನ್ನು 25 ವರ್ಷದ ಹಿಂದಕ್ಕೆ ತೆಗೆದುಕೊಂಡು ಹೋಗ್ತಿದ್ದಾರೆ. ಅಭಿವೃದ್ಧಿ ಮಾಡಲು ಕಷ್ಟವಾಗುತ್ತೆ. ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡ್ತಿದ್ದಾರೆ. ಅವರು ಕೊಟ್ಟಿರುವ ಯೋಜನೆ 20% ಜನರಿಗೆ ತಲುಪಿಲ್ಲ. ಅಕ್ಕಿ ಕೊಡ್ತಿವಿ ಅಂತಾರೆ, ರೇಷನ್ ಕಾರ್ಡ್ ರದ್ದು ಮಾಡ್ತಾರೆ. ಮಹಿಳೆಯರಿಗೆ 2 ಸಾವಿರವನ್ನು 100% ಕೊಟ್ಟಿದ್ದಾರಾ? ಯುವನಿಧಿ ಕೊಟ್ಟಿಲ್ಲ, ಕರೆಂಟ್ ಉತ್ಪಾದನೆ ಇಲ್ಲ, ಕರೆಂಟ್ ಎಲ್ಲಿ ಕೊಡ್ತಾರೆ? ಕೃತಕ ಅಭಾವ ಹುಟ್ಟಿಸುವ ಕೆಲಸವನ್ನ ಮಾಡ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಏನು ನಡೆಯುತ್ತಿಲ್ಲ. ಬಿಜೆಪಿ ಸರ್ಕಾರದಲ್ಲಿ ಆಗಿರುವ ಕಾಮಗಾರಿಗಳಿಗೆ ಈಗಿರುವ ಶಾಸಕರು, ಮಂತ್ರಿಗಳು ಕಮಿಷನ್ ತಗೊಳ್ತಿದ್ದಾರೆ. ಇದಕ್ಕೆ ಸಾಕ್ಷಿ ಕೊಡಕ್ಕಾಗಲ್ಲ. ಗುತ್ತಿಗೆದಾರರ ಬಳಿ ಕೇಳಿದ್ರೆ ಗೊತ್ತಾಗುತ್ತೆ ಎಂದರು.

ಇದನ್ನೂ ಓದಿ: ನಾನೇನು ರಾಜಕೀಯ ಸನ್ಯಾಸಿಯಲ್ಲ, ಲೋಕಸಭಾ ಚುನಾವಣೆ ನಂತರ ವೈಯಕ್ತಿಕ ರಾಜಕಾರಣ ಮಾಡುತ್ತೇನೆ: ಸಿ ಟಿ ರವಿ

ABOUT THE AUTHOR

...view details