ಮಂಡ್ಯ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಟಿಪ್ಪುವಿನ ರೀತಿ ಹೊಡೆದು ಹಾಕಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಸಚಿವ ಅಶ್ವತ್ಥನಾರಾಯಣ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಸಾಕಷ್ಟು ದಿನಗಳಿಂದ ಟಿಪ್ಪು ಮತ್ತು ಸಾವರ್ಕರ್ ವಿಚಾರ ಸುದ್ದಿಯಲ್ಲಿದೆ. ಈ ವೇಳೆ ಟಿಪ್ಪು ಬಗ್ಗೆ ಕಾಂಗ್ರೆಸ್ನವರು ಒಂದು ಹೇಳಿಕೆ ನೀಡಿದ್ರೆ, ಮತ್ತೊಂದೆಡೆ ಟಿಪ್ಪುವನ್ನು ವಿರೋಧಿಸುತ್ತಾ ಬಿಜೆಪಿಯವರು ಸಾವರ್ಕರ್ ಸಾಧನೆ ಬಗ್ಗೆ ತಿಳಿಸುತ್ತಿದ್ದಾರೆ.
ಇದೀಗ ಮತ್ತೆ ಟಿಪ್ಪು ವಿಚಾರ ಇಟ್ಟುಕೊಂಡೇ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಚಿವ ಸಚಿವ ಅಶ್ವತ್ಥನಾರಾಯಣ್ ವಾಗ್ದಾಳಿ ನಡೆಸಿದ್ದಾರೆ. ಮಂಡ್ಯದ ಸಾತನೂರು ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುವ ಭರದಲ್ಲಿ, ಟಿಪ್ಪುವಿನ ಜಾಗಕ್ಕೆ ಸಿದ್ದರಾಮಯ್ಯರವರು ಬಂದು ಬಿಡುತ್ತಾರೆ. ನಿಮಗೆ ಸಾವರ್ಕರ್ ಬೇಕಾ, ಟಿಪ್ಪು ಬೇಕಾ? ಎಂಬುದನ್ನು ನೀವೇ ತೀರ್ಮಾನಿಸಿ. ಹುರಿಗೌಡ ನಂಜೇಗೌಡ ಅವರು ಟಿಪ್ಪುವಿಗೆ ಏನು ಮಾಡಿದ್ರು ಅನ್ನೋದು ನಿಮಗೆ ಗೊತ್ತಿದೆ. ಅದೇ ರೀತಿ ಇವರನ್ನು ಹೊಡೆದು ಹಾಕಬೇಕು. ರಾಜ್ಯದಲ್ಲಿ ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದಿದ್ದಾರೆ. ಇದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಸಂಪುಟದಿಂದ ತಕ್ಷಣ ಅಶ್ವತ್ಥನಾರಾಯಣ್ ವಜಾಗೊಳಿಸಿ.. ಸಚಿವ ಅಶ್ವತ್ಥನಾರಾಯಣ್ ಅವರ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೆಂಡಾಮಂಡಲವಾಗಿದ್ದಾರೆ. ಈ ಕುರಿತು ಸರಣಿ ಟ್ವಿಟ್ ಮಾಡಿರುವ ಅವರು, ಸಚಿವ ಡಾ. ಅಶ್ವತ್ಥನಾರಾಯಣ ಅವರು ಮಾನಸಿಕ ಅಸ್ವಸ್ಥರ ರೀತಿ ಹೇಳಿಕೆ ನೀಡಿದ್ದು, ತಕ್ಷಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ಬಂಧಿಸಬೇಕು. ಇಲ್ಲದಿದ್ದರೆ ಅಶ್ವತ್ಥನಾರಾಯಣ್ ಮಾನಸಿಕ ಅಸ್ವಸ್ಥರೇ ಎಂಬುದನ್ನು ಭಾರತೀಯ ಜನತಾ ಪಕ್ಷ ಒಪ್ಪಿಕೊಂಡಂತಾಗುತ್ತದೆ ಎಂದು ಹೇಳಿದ್ದಾರೆ.