ಮಂಡ್ಯ:ಸಕ್ಕರೆ ನಾಡಿನಲ್ಲಿ ಕಬ್ಬು ಸಂಶೋಧನಾ ಕೇಂದ್ರ ಹಾಗೂ ಪಶುವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಬ್ಬು ಸಂಶೋಧನಾ ಕೇಂದ್ರ ಹಾಗೂ ಪಶು ವೈದ್ಯಕೀಯ ಕಾಲೇಜು ಸ್ಥಾಪನೆಗೆ ಈ ಭಾಗದ ಶಾಸಕರೊಟ್ಟಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಎಂದರು.
ಮಂಡ್ಯದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿಕೆ ಬೆಲೆ ಏರಿಕೆ ಬಿಸಿ ತಡೆಯುವುದು ಅನಿವಾರ್ಯ: ಪ್ರಸ್ತುತ ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿದ್ದು, ಇಂಧನ ಬೆಲೆ ಹೆಚ್ಚಳ ಇದಕ್ಕೆ ಕಾರಣವಾಗಿದೆ. ಆದರೂ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ತಡೆಯುವುದು ಅನಿವಾರ್ಯವಾಗಿದೆ ಎಂದರು. ಬೆಲೆ ಹೆಚ್ಚಳಕ್ಕೆ ಸರ್ಕಾರ ಏನೂ ಮಾಡಲಾಗದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಕಡಿಮೆಯಾದಲ್ಲಿ ಮಾತ್ರ ಎಲ್ಲವೂ ಸರಿಯಾಗುತ್ತದೆ ಎಂದ ಉತ್ತರಿಸಿದರು.
ನಿಂದಕರಿರಬೇಕು ಹಂದಿಯ ಹಾಗೇ: ತೈಲ ಬೆಲೆ ಏರಿಸಿ, ಕೋವಿಡ್‌ಗೆ ಉಚಿತ ಲಸಿಕೆ ನೀಡುತ್ತಿದ್ದಾರೆ ಎಂಬ ವಿಪಕ್ಷಗಳ ಆರೋಪ ತಳ್ಳಿ ಹಾಕಿದ ಸಚಿವರು, ನಿಂದಕರಿರಬೇಕು ಹಂದಿಯ ಹಾಗೆ ಎಂದು ಬಸವಣ್ಣನವರೇ ವಚನದಲ್ಲಿ ಹೇಳಿದ್ದಾರೆ. ನಿಂದಿಸುವವರು ಇರಬೇಕು. ಅವರು ನಿಂದಿಸುತ್ತಲೇ ಇರುತ್ತಾರೆ. ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಪರಿಸ್ಥಿತಿ ಅರಿತು ಮಾತನಾಡುವುದು ಅಗತ್ಯ ಎಂದು ತಿರುಗೇಟು ನೀಡಿದರು.
ಮುಖ್ಯಮಂತ್ರಿ ಬದಲಾವಣೆ ಇಲ್ಲ:ಯಡಿಯೂಪ್ಪನವರೇ ಮುಂದಿನ ಎರಡು ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರೇ ಹೇಳಿದ್ದಾರೆ. ನಮ್ಮಲ್ಲಿ ಯಾವುದೇ ಸಹಿ ಸಂಗ್ರಹವೂ ಇಲ್ಲ ಎಂದು ನುಡಿದರು.