ಮಂಡ್ಯ:ಕೊರೊನಾಗೆ ಬಲಿಯಾದ ಅನಾಥ ಶವಗಳಿಗೆ ಸರ್ಕಾರದಿಂದಲೇ ಮುಕ್ತಿ ಕಾರ್ಯ ನಡೆಸಿದ್ದು, ಸಚಿವ ಆರ್.ಅಶೋಕ್ ಅನಾಥ ಶವಗಳ ಅಸ್ಥಿ ವಿಸರ್ಜನೆ ಮಾಡಿದ್ದಾರೆ.
ಕೋವಿಡ್‌ನಿಂದ ಮೃತಪಟ್ಟ ಅನಾಥ ಶವಗಳ ಅಸ್ಥಿ ವಿಸರ್ಜಸಿದ ಆರ್.ಅಶೋಕ್ ಜಿಲ್ಲೆಯ ಮಳವಳ್ಳಿ ತಾಲೂಕಿನ ಬೆಳಕವಾಡಿ ಬಳಿಯ ಶ್ರೀ ಕಾಶಿ ವಿಶ್ವನಾಥ ದೇವಾಲಯ ಸಮೀಪದ ಕಾವೇರಿ, ಕಪಿಲಾ ನದಿ ಬಳಿ ಶವಗಳ ಮುಕ್ತಿ ಕಾರ್ಯ ನಡೆಸಿದ್ದಾರೆ. ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಅಸ್ಥಿ ವಿಸರ್ಜನೆ ವಿಧಿವಿಧಾನ ನಡೆಸಲಾಗಿದೆ. ಬೆಂಗಳೂರಿನ ವಿವಿಧೆಡೆ ಕೋವಿಡ್ ಮೃತರ ಅಂತ್ಯಕ್ರಿಯೆ ನಡೆದಿದೆ. ಆದರೆ, ಅಂತ್ಯಕ್ರಿಯೆ ಬಳಿಕ ಸಂಬಂಧಿಕರು ಅಸ್ಥಿ ತೆಗೆದುಕೊಂಡು ಹೋಗುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರದಿಂದಲೇ ಅಸ್ಥಿ ವಿಸರ್ಜನೆಗೆ ನಿರ್ಧಾರ ಮಾಡಿದ್ದು, 12 ಪುರೋಹಿತರಿಂದ ಮಹಾಗಣಪತಿ ಪೂಜೆ, ನಾರಾಯಣ ಬಲಿ, ಅಕಾಲ ಮರಣ ಪ್ರಾಯಶ್ಚಿತ್ತ, ತಿಲಹೋಮ, ಪಿಂಡ ಪ್ರದಾನ, ಅಸ್ಥಿ ನಾರಾಯಣ ಪೂಜೆ ನಡೆಸಿ ಅಸ್ಥಿ ವಿಸರ್ಜನೆ ಮಾಡಲಾಗಿದೆ.
ಸರ್ಕಾರದ ಪರವಾಗಿ ಸಚಿವರಿಂದ ಅಸ್ಥಿ ವಿಸರ್ಜನೆ
ನಂತರ ಮಾತನಾಡಿದ ಸಚಿವ ಅಶೋಕ್, ಕೊರೊನಾ ಮಹಾಮಾರಿಗೆ ಹಲವಾರು ಜನರು ಬಲಿಯಾಗಿದ್ದಾರೆ. ಮೃತ ದೇಹ, ಅಸ್ಥಿ ತೆಗೆದುಕೊಂಡು ಹೋಗಲು ಕುಟುಂಬಸ್ಥರು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಕೆಲವರು ನಮಗೂ ಸೋಂಕು ತಗುಲಬಹುದು ಎಂದು ಶವಗಳ ಬಳಿಯೂ ಕುಟುಂಬಸ್ಥರು ಬರುತ್ತಿಲ್ಲ. ಹೀಗಾಗಿ ಸರ್ಕಾರದ ಪರವಾಗಿ ಸಂಕಲ್ಪಕ್ಕೆ ಬಂದು ಅಸ್ಥಿ ವಿಸರ್ಜನೆ ಮಾಡಿದ್ದೇನೆ ಎಂದರು.
ಯಾರೂ ಅನಾಥರಲ್ಲ, ಬದುಕಿದ್ದಾಗ ಎಲ್ಲರೂ ಸಹ ಸಮಾಜಕ್ಕೆ ಕೆಲಸ ಮಾಡಿದ್ದಾರೆ. ನಮ್ಮ ರಾಜ್ಯ ಮಾನವೀಯತೆ ಮೆರೆದಂತಹ ರಾಜ್ಯವಾಗಿದೆ. ಈಗ ನಾವು ನಮ್ಮ ಕರ್ತವ್ಯ ಮಾಡಬೇಕು. ಇದೇ ಮೊದಲ ಬಾರಿಗೆ ದೇಶದಲ್ಲಿ ಸರ್ಕಾರದ ವತಿಯಿಂದ ಅಸ್ಥಿ ವಿಸರ್ಜನೆ ಮಾಡುತ್ತಿದ್ದೇವೆ. ಸತ್ತವರಿಗೆ ಗೌರವಯುತವಾಗಿ ಶವಸಂಸ್ಕಾರ ಮಾಡಲು ಸರ್ಕಾರ ಮುಂದಾಗಿದೆ ಎಂದರಲ್ಲದೇ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿ ಈ ಕಾರ್ಯಕ್ರಮ ಮಾಡಬೇಕು ಎಂದು ಆದೇಶ ಹೊರಡಿಸಿದ್ದೇನೆ. ಸತ್ತವರ ಸಂಬಂಧಿಕರು ಯಾವ ಸಮಯದಲ್ಲಾದರೂ ಬರಲಿ. ಅವರಿಗೆ ಮರಣ ಪ್ರಮಾಣ ಪತ್ರ ನೀಡುವುದಾಗಿ ತಿಳಿಸಿದ್ದೇನೆ. ಅಸ್ಥಿ ತೆಗೆದುಕೊಂಡು ಹೋಗಲು 15 ದಿನ ಗಡುವು ನೀಡಲಾಗಿದ್ದು, ಆಗಲೂ ಸಹ ಸಂಬಂಧಿಗಳು ಬರದಿದ್ದರೆ ಸರ್ಕಾರವೇ ವಿಸರ್ಜನೆ ಮಾಡುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು.