ಮಂಡ್ಯ:ಧಮ್-ತಾಕತ್ತು ಇದ್ರೆ ರಾಜಧನ ಯಾರು ವಂಚಿಸಿದ್ದಾರೆ ಎನ್ನುವುದನ್ನು ಹೇಳಬೇಕು ಎಂದು ಸಂಸದೆ ಸುಮಲತಾ ವಿರುದ್ಧ ಮೇಲುಕೋಟೆ ಕ್ಷೇತ್ರದ ಶಾಸಕ ಸಿ.ಎಸ್ ಪುಟ್ಟರಾಜು ವಾಗ್ದಾಳಿ ನಡೆಸಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಗಣಿಗಾರಿಕೆಯಲ್ಲಿ ಸರ್ಕಾರಕ್ಕೆ ವಂಚನೆ ಮಾಡಲಾಗಿದೆ ಎಂದು ಪರೋಕ್ಷವಾಗಿ ಜೆಡಿಎಸ್ ನಾಯಕರ ಮೇಲೆ ಆರೋಪ ಮಾಡಿದ್ದ ಸುಮಲತಾ ಮಾತಿಗೆ ಖಾರವಾಗಿ ಶಾಸಕಪ್ರತಿಕ್ರಿಯೆ ನೀಡಿದ್ದಾರೆ.
ಜನ ಮೆಚ್ಚಿಸಲು ಮಾತನಾಡುವ ಮಾತನ್ನು ಇವರಿಂದ ಕಲಿಯುವ ಅವಶ್ಯಕತೆ ಇಲ್ಲ. ನಾನು 40 ವರ್ಷದಿಂದ ಒಂದು ಕಪ್ಪು ಚುಕ್ಕಿ ಇರದ ಹಾಗೆ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ನಾವು ಕೆಲಸದಲ್ಲಿ, ಅಭಿವೃದ್ಧಿಯಲ್ಲಿ ಮೋಡಿ ಮಾಡುತ್ತೇವಾ ಮಾತಾಲ್ಲಿ ಮೋಡಿ ಮಾಡುತ್ತೇವಾ ಎಂದು ಜನರಿಗೆ ಗೊತ್ತಿದೆ.
ಗಣಿಗಾರಿಕೆಯನ್ನು ಸುಮಲತಾ ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಅವರಿಗೆ ಅದೊಂದೇ ಅಸ್ತ್ರ ಇರೋದು. ಮೈಸೂರು-ಬೆಂಗಳೂರು ರಸ್ತೆ ವಿಚಾರದಲ್ಲಿ ಅವರು ಕೈ ಹಾಕಿದ್ದಾರೆ, ಅದರಲ್ಲಿ ಏನು ಆಗಿದೆ ಎನ್ನುವುದು ಎಲ್ಲರಿಗೂ ಗೊತ್ತು. ನಾವು ಅವರನ್ನು ಟಾರ್ಗೆಟ್ ಮಾಡುತ್ತಿಲ್ಲ. ಜನರೇ ಅವರನ್ನು ಟಾರ್ಗೆಟ್ ಮಾಡುತ್ತಾರೆ. ಚುನಾವಣೆ ಬರಲಿ ಯಾರು ಯಾರನ್ನು ಟಾರ್ಗೆಟ್ ಮಾಡುತ್ತಾರೆ ಎಂದು ಗೊತ್ತಾಗುತ್ತದೆ ಎಂದರು.