ಮಂಡ್ಯ :ಸಚಿವರಾದ ನಾರಾಯಣಗೌಡ ಹಾಗೂ ಸುಧಾಕರ್ ಸಮ್ಮುಖದಲ್ಲಿ ಕೊರೊನಾ ಹತೋಟಿ ಕುರಿತ ಸಭೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಮಂಡ್ಯದಲ್ಲಿ ಸಚಿವದ್ವಯರಿಂದ ಕೊರೊನಾ ಕುರಿತ ಸಭೆ.. ಸಭೆಯಲ್ಲಿದ್ದ ಸಚಿವರುಗಳಿಗೆ,ಸಂಸದೆ ಸುಮಲತಾ ಅಂಬರೀಶ್ ಹಾಗೂ ಜೆಡಿಎಸ್ ಶಾಸಕರು ಹಾಗೂ ಇತರ ಜನಪ್ರತಿನಿಧಿಗಳಿಗೆ ಕೊರೊನಾ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ತೆಗೆದುಕೊಂಡಿರುವ ಮುನ್ನೆಚ್ಚರಿಕಾ ಕ್ರಮ ಹಾಗೂ ಚಿಕಿತ್ಸಾ ವಿಧಾನಗಳ ಕುರಿತಂತೆ ವಿವರಿಸಿದರು. ಜಿಲ್ಲೆಯಲ್ಲಿ ಈವರೆಗೂ ಎಷ್ಟು ಜನರಿಗೆ ಟೆಸ್ಟ್ ಮಾಡಲಾಗಿದೆ, ಹೋಂ ಕ್ವಾರಂಟೈನ್ ಮಾಹಿತಿ, ಲಾಕ್‌ಡೌನ್ ಹೀಗೆ ಪ್ರತಿಯೊಂದರ ಬಗೆಗಿನ ಮಾಹಿತಿ ನೀಡಿದರು.
ಚರ್ಚೆಗೆ ಬಂದ ಗಲಾಟೆ: ಪತ್ರಕರ್ತರಿಗೆ ಕೋವಿಡ್-19ರ ಟೆಸ್ಟ್ ಸಂದರ್ಭದಲ್ಲಿ ಉಂಟಾದ ಗಲಾಟೆ ಸಭೆಯಲ್ಲಿ ಚರ್ಚೆಗೆ ಬಂದಿತು. ಶಾಸಕ ರವೀಂದ್ರ ಶ್ರೀಕಂಠಯ್ಯ ಈ ಕುರಿತು ಮಾತನಾಡಿಸ ಅಂದಿನ ವಾಸ್ತವ ಏನು, ಸರ್ಕಾರ ಏನು ಆದೇಶ ನೀಡಿದೆ ಎಂಬುದರ ಕುರಿತು ತನಿಖೆ ಮಾಡಿ ತಪ್ಪಿತಸ್ಥ ಮೇಲೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
ಸಭೆಗಾಗಿ ಸಂಧಾನಕಾರರಾದ ಸಚಿವರು: ಇನ್ನು ಸಭೆ ಆರಂಭಕ್ಕೂ ಮೊದಲೇ ಜೆಡಿಎಸ್ ಶಾಸಕರು ಸಿಇಒ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದರು. ವಿಚಾರ ತಿಳಿದ ಉಸ್ತುವಾರಿ ಸಚಿವ ನಾರಾಯಣ ಗೌಡ ಕೊಠಡಿಗೆ ತೆರಳಿ ಮಾತುಕತೆ ನಡೆಸಿದರು. ಸಚಿವರು ಕೊಠಡಿಗೆ ಹೋದ ನಂತರ ಎಲ್ಲಾ ಶಾಸಕರು ಸಭೆಗೆ ಹಾಜರಾಗಿದ್ದು ವಿಶೇಷವಾಗಿತ್ತು.