ಮಂಡ್ಯ :ಕೊನೆಗೂ ಮನ್ಮುಲ್ ಹೈಡ್ರಾಮಾಕ್ಕೆ ತೆರೆಬಿತ್ತು. ಅಧ್ಯಕ್ಷ ಸ್ಥಾನವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದರಲ್ಲಿ ಕೈ ಸಕ್ಸಸ್ ಆಯ್ತು. ರಾಜ್ಯ ಮಟ್ಟದಲ್ಲಿ ಬಿಜೆಪಿ, ಜೆಡಿಎಸ್ ಹೊಂದಾಣಿಕೆ ಆಗ್ತಿದ್ರೆ, ಮನ್ಮುಲ್ನಲ್ಲಿ ಬಿಜೆಪಿ ಬೆಂಬಲಿತ ಸದಸ್ಯ ಕಾಂಗ್ರೆಸ್ಗೆ ಸಪೋರ್ಟ್ ಮಾಡೋ ಮೂಲಕ ಠಕ್ಕರ್ ಕೊಟ್ರು. ಒಂದೆಡೆ ಜೆಡಿಎಸ್ ಇಬ್ಬರು ಸದಸ್ಯರನ್ನ ಅನರ್ಹಗೊಳಿಸಿದ್ದಕ್ಕೆ ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಇಷ್ಟಕ್ಕೆಲ್ಲ ಕಾರಣ ಆಗಿದ್ದು ಮನ್ ಮುಲ್ ಎಲೆಕ್ಷನ್.
ಹೌದು, ಇಂದು ನಡೆದ ಮನ್ ಮುಲ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಿತು. ಜೆಡಿಎಸ್ 7, ಕಾಂಗ್ರೆಸ್ 3, ಬಿಜೆಪಿ 2, ಅಧಿಕಾರಿಗಳು 5, ಒಟ್ಟು 17 ಮತಗಳಿರುವ ಮನ್ ಮುಲ್ ಆಡಳಿತ ಮಂಡಳಿಯಲ್ಲಿ ಕೇವಲ 3 ಸದಸ್ಯರಿರುವ ಕಾಂಗ್ರೆಸ್ ಅಧಿಕಾರವನ್ನ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಯ್ತು.
ಗೆಲ್ಲಲು 9 ಮತಗಳು ಬೇಕಾಗಿತ್ತು. ಅದಕ್ಕಾಗಿ 5 ಅಧಿಕಾರಿಗಳು 3 ಕಾಂಗ್ರೆಸ್ ಮತಗಳಿತ್ತು. ಏನಾದರೂ ಮಾಡಿ ಗೆಲ್ಲಲೇಬೇಕು ಎಂದು ಪ್ಲಾನ್ ಮಾಡಿದ ಕಾಂಗ್ರೆಸ್ ಬಿಜೆಪಿಯ ಒಬ್ಬ ಸದಸ್ಯ ಎಸ್.ಪಿ ಸ್ವಾಮಿಯನ್ನ ಸೆಳೆದು 9 ಮತಗಳನ್ನ ಪಡೆದು ಗೆಲುವಿನ ನಗೆ ಬೀರಿತು.
ಜೆಡಿಎಸ್ ಸದಸ್ಯರಿಂದ ಎಆರ್ ಕಚೇರಿಗೆ ಮುತ್ತಿಗೆ: ಈ ಮಧ್ಯೆ ಜೆಡಿಎಸ್‌ನ ರಾಮಚಂದ್ರು ಹಾಗೂ ವಿಶ್ವನಾಥ್ ಅವರನ್ನ ಅನುಮತಿ ಪಡೆಯದೇ ಕಟ್ಟಡ ನಿರ್ಮಾಣ ಮಾಡಿದ್ದಾರೆ ಎಂಬ ಕಾರಣ ನೀಡಿ ಅನರ್ಹಗೊಳಿಸಲಾಗಿತ್ತು. ಇದನ್ನು ವಿರೋಧಿಸಿ ಜೆಡಿಎಸ್ ಸದಸ್ಯರು ಎಆರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರಲ್ಲದೇ ಕಾಂಗ್ರೆಸ್ ಅಧಿಕಾರ ಹಿಡಿಯಲು ವಾಮ ಮಾರ್ಗ ಅನುಸರಿಸಿ, ನಮಗೆ ಕಾನೂನು ಬಾಹಿರವಾಗಿ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.