ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗಿಂತ ಮಂಡ್ಯ ಲೋಕಸಭೆ ಕ್ಷೇತ್ರ ಭಾರೀ ಸುದ್ದಿಯಲ್ಲಿದೆ. ಒಂದೆಡೆ ಸುಮಲತಾ, ಮತ್ತೊಂದೆಡೆ ನಿಖಿಲ್.
ಮಂಡ್ಯದಲ್ಲಿ ಸುಮಲತಾ, ನಿಖಿಲ್ ಪ್ರಚಾರ ಇಡೀ ದೇಶವೇ ತಿರುಗಿ ನೋಡುವ ರೀತಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹಾಗೂ ಕಾಂಗ್ರೆಸ್ ಬೆಂಬಲಿತ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪ್ರಚಾರದಲ್ಲಿ ಅಬ್ಬರಿಸಿದ್ದಾರೆ. ಅಲ್ಲದೆ ಮಂಡ್ಯದ ರಣಕಣದಲ್ಲಿ ವಾಕ್ಸಮರ ಕೂಡಾ ಜೋರಾಗಿದೆ. ಇನ್ನು ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಬೇಕು ಎಂದು ಮೈತ್ರಿ ಧರ್ಮದಂತೆ ಮೈತ್ರಿ ಸರ್ಕಾರವೇ ಮಂಡ್ಯದಲ್ಲಿ ಬೀಡು ಬಿಟ್ಟಿದೆ. ಈ ಮೈತ್ರಿಗೆ ಮಂಡ್ಯದ ಜನರಲ್ಲಿ ಅಸಮಾಧಾನವಿದೆ ಎಂಬುದು ಮೈತ್ರಿ ಸರ್ಕಾರಕ್ಕೂ ಗೊತ್ತು. ಆದರೆ ಕುಮಾರಸ್ವಾಮಿ ಮಾತ್ರ ಮಗನನ್ನು ಎಂಪಿ ಮಾಡೇ ಮಾಡ್ತೀನಿ ಎಂಬ ಹಠಕ್ಕೆ ಬಿದ್ದಿದ್ದಾರೆ ಎನ್ನಿಸುತ್ತಿದೆ.
ಆದರೆ ಕುಮಾರಸ್ವಾಮಿ ಅವರಿಗೆ ಮಂಡ್ಯದ ಜನ ಮಾತ್ರ ನಿದ್ದೆಗೆಡಿಸಿರುವಂತೆ ಕಾಣುತ್ತಿದೆ. ಹೌದು, ಮಂಡ್ಯದಲ್ಲಿ 7 ಜೆಡಿಎಸ್ ಶಾಸಕರು, ಒಬ್ಬರು ಎಂಪಿ, ಇಬ್ಬರು ಮಂತ್ರಿಗಳಿದ್ದರೂ ಎಲ್ಲೋ ಒಂದು ಕಡೆ ಮೈತ್ರಿ ಸರ್ಕಾರಕ್ಕೆ ಹಿನ್ನೆಡೆಯಾಗುತ್ತಿದೆ ಎಂಬ ಮಾತು ಮಂಡ್ಯದಲ್ಲಿ ಸದ್ದು ಮಾಡುತ್ತಿದೆ. ಏಕೆಂದರೆ ಕೆಲವು ದಿನಗಳಿಂದ ಸುಮಲತಾ ಹೋದಲ್ಲೆಲ್ಲಾ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಬಾವುಟಗಳು ರಾರಾಜಿಸುತ್ತಿದ್ದವು. ಈ ಮೂರೂ ಪಕ್ಷದ ಕಾರ್ಯಕರ್ತರು ಹುರುಪಿನಿಂದ ಸುಮಲತಾ ಪರ ಪ್ರಚಾರ ಮಾಡುತ್ತಿದ್ದರು.
ಈ ಪ್ರಮುಖ ಮೂರೂ ಪಕ್ಷಗಳ ಕಾರ್ಯಕರ್ತರ ಮೈತ್ರಿ ಸ್ವಾತಂತ್ರ್ಯ ಭಾರತದ ಚುನಾವಣಾ ಇತಿಹಾಸದಲ್ಲೇ ಮೊದಲ ಬಾರಿಯಾಗಿದೆ. ಒಬ್ಬ ಪಕ್ಷೇತರ ಅಭ್ಯರ್ಥಿಯ ಪ್ರಚಾರದ ವೇಳೆ ರಾಜ್ಯದ ಮೂರೂ ಪ್ರಕ್ಷಗಳ ಬಾವುಟ ಹಾರಿಸಿ ಮಂಡ್ಯದ ಜನರು ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ.