ಮಂಡ್ಯ :ತಾಲೂಕಿನ ಹುನುಗನಹಳ್ಳಿ ಕಾಲೋನಿಯ ಸುತ್ತುಕಟ್ಟೆ ಬಳಿ ಗುರುವಾರ ಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ವ್ಯಾಪ್ತಿಯ ಅರಣ್ಯ ಇಲಾಖೆ ಅಧಿಕಾರಿಗಳ ವಶದಿಂದ ತಪ್ಪಿಸಿಕೊಂಡಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿರುವುದು ದೃಢಪಟ್ಟಿದೆ. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ನಿನ್ನೆ ಸಿಐಡಿ ಅಧಿಕಾರಿಗಳು ಶವಾಗಾರ ಹಾಗೂ ಮೃತದೇಹ ಸಿಕ್ಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹಲವು ಮಾಹಿತಿ ಪಡೆದುಕೊಂಡಿದ್ದಾರೆ.
ಮೃತನನ್ನು ಹೊಳೆನರಸೀಪುರ ತಾಲೂಕಿನ ದೊಡ್ಡಬ್ಯಾಗತವಳ್ಳಿ ಗ್ರಾಮದ ರವಿ(46) ಎಂದು ಗುರುತಿಸಲಾಗಿದೆ. ಹೇಮಾವತಿ ಎಡದಂಡೆ ನಾಲೆಯಿಂದ ಕೆರೆಗಳಿಗೆ ಬಿಡುತ್ತಿದ್ದ ನೀರಿನ ಪರಿವೀಕ್ಷಣೆ ಸಮಯದಲ್ಲಿ ಕಿರಿಯ ಎಂಜಿನಿಯರ್ ಎನ್ ಜೆ ಅಭಿಷೇಕ್ ನಾಲೆಯಲ್ಲಿದ್ದ ಶವವನ್ನು ಗಮನಿಸಿ ಬಸರಾಳು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದಾಗ ಕೈಗಳನ್ನು ಟವೆಲ್ನಿಂದ ಹಿಂದಕ್ಕೆ ಕಟ್ಟಿದ್ದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಹೀಗಾಗಿ, ಯಾರೋ ಕೊಲೆ ಮಾಡಿ ಶವವನ್ನು ನಾಲೆಯಲ್ಲಿ ಬಿಸಾಡಿರಬಹುದೆಂದು ಶಂಕಿಸಲಾಗಿತ್ತು.
ಸ್ಥಳಕ್ಕೆ ಡಿವೈಎಸ್ಪಿ ಟಿ.ಮಂಜುನಾಥ್ ಅವರು ಭೇಟಿ ನೀಡಿ ಪರಿಶೀಲಿಸಿದ್ದರು. ಜೊತೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಬಸರಾಳು ಪೊಲೀಸರು, ಎಲ್ಲ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸಿದ್ದರು. ಆಗ ಆರೋಪಿ ರವಿ ಅರಣ್ಯ ಇಲಾಖೆ ಅಧಿಕಾರಿಗಳಿಂದ ತಪ್ಪಿಸಿಕೊಂಡು ನಾಲೆಗೆ ಬಿದ್ದು ಪಟ್ಟಿರುವುದು ದೃಢಪಟ್ಟಿದೆ. ಹೀಗಾಗಿ, ಈ ಪ್ರಕರಣವನ್ನು ಕಸ್ಟೋಡಿಯಲ್ ಎಂದು ಪರಿಗಣಿಸಲಾಗಿದೆ.