ಮಂಡ್ಯ :ಎಲ್ಲೇ ಹೋದ್ರೂ, ಯಾರ ಬಳಿಯೇ ಕೇಳಿದ್ರೂ ಈಗ ಕೊರೊನಾದ್ದೇ ಮಾತು. ಕೋವಿಡ್ನಿಂದಾದ ಸಾವು-ನೋವಿನ ಪ್ರಮಾಣ ಬಹಳ. ಇತ್ತ ರೋಗಿಗಳಿಗೆ ಚಿಕಿತ್ಸೆ ನೀಡುವವರು ಸಹ ಕೊರೊನಾದಿಂದ ಕೊನೆಯುಸಿರೆಳೆದಿದ್ದಾರೆ. ಇದನ್ನ ಗಮನಿಸಿದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕೋವಿಡ್ ಚಿಕಿತ್ಸೆ ಮಾಡುವುದಕ್ಕೆ ಮೆಡಿಕಲ್ ವೈ-ರೋಬೋಟ್ ಕಂಡು ಹಿಡಿದು ವಿಶ್ವದ ಗಮನ ಸೆಳೆದಿದ್ದಾನೆ.
ಈ ರೋಬೋ ಕಂಡು ಹಿಡಿದಿರುವ ವಿದ್ಯಾರ್ಥಿ ಹೆಸರು ಮಣಿಕಂಠ ಸವದತ್ತಿ. ಈತ ಮೂಲತಃ ಹುಬ್ಬಳ್ಳಿಯವನಾದ್ರೂ ಸಹ ಮಂಡ್ಯದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ 5ನೇ ಸೆಮಿಸ್ಟರ್ ಪದವಿ ಕಲಿಯುತ್ತಿದ್ದಾರೆ. ಲಾಕ್‍ಡೌನ್ ಸಂದರ್ಭದಲ್ಲಿ ಈ ಸಾಧನೆ ಮಾಡಿದ್ದಾನೆ.
ಐಇಇಇ ಇಂಡಿಯಾ ಕೌನ್ಸಿಲ್ ಸಂಸ್ಥೆಯು ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿ ಪ್ರಾಜೆಕ್ಟ್ ಮಾಡಲು ಆಸಕ್ತಿ ಇರುವ ವಿದ್ಯಾರ್ಥಿಗಳು ತಮ್ಮ ಪ್ಲಾನ್ಗೆ ಸಂಬಂಧಿಸಿ ವರದಿ ಕಳುಹಿಸಿ ಕೊಡುವಂತೆ ಸೂಚಿಸಿತ್ತು. ವಿದ್ಯಾರ್ಥಿ ಮಣಿಕಂಠ ಸವದತ್ತಿಯು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ರೋಬೋ ಕುರಿತ ವರದಿಯನ್ನು ಕಳುಹಿಸಿದ್ದ.
ವರದಿಯನ್ನು ನೋಡಿದ್ದ ಸಂಸ್ಥೆಯು ಪ್ರಾಜೆಕ್ಟ್ ಸಿದ್ಧಗೊಳಿಸುವಂತೆ ಅದರ ವೆಚ್ಚಕ್ಕಾಗಿ 12 ಸಾವಿರ ರೂಪಾಯಿ ಕೊಟ್ಟಿತ್ತು. ಅದನ್ನು ಬಳಸಿಕೊಂಡು ಸಿ ಪ್ರೋಗ್ರಾಂ ಬಳಸಿ ಈ ವೈ-ರೋಬೋ ಕಂಡು ಹಿಡಿದಿದ್ದೇನೆ. ಆರೋಗ್ಯ ಸಿಬ್ಬಂದಿಗೆ ನೆರವಾಗಲೆಂದು ಇದನ್ನು ಮಾಡಿದ್ದೇನೆಂದು ವಿದ್ಯಾರ್ಥಿ ಮಣಿಕಂಠ ಸವದತ್ತಿ ತಿಳಿಸಿದ್ಧಾರೆ.