ಮಂಡ್ಯ: ಮದುವೆಗೆ ಅಕ್ಕ ಒಪ್ಪಲಿಲ್ಲ ಎಂದು ಮದುವೆ ಮದುವೆ ಗಂಡು ತಂಗಿಯನ್ನೇ ಅಪಹರಣ ಮಾಡಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಆಗಸ್ಟ್ 9 ರಂದು ನಡೆದಿದ್ದು, ಯುವತಿಯ ಪೋಷಕರು ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.
ಎಸ್ಎಸ್ಎಲ್ಸಿ ಉತ್ತೀರ್ಣರಾಗಿದ್ದ ವಿದ್ಯಾರ್ಥಿನಿ ರಕ್ಷಿತಾಳನ್ನು ನಾಗಮಂಗಲ ಮೂಲದ ಗಿರೀಶ್ ಎನ್ನುವಾತ ಅಪಹರಣ ಮಾಡಿದ್ದಾನೆ ಎಂದು ಆಕೆಯ ಪೋಷಕರಾದ ನಂದೀಶ್ ಹಾಗೂ ಸವಿತಾ ಆರೋಪಿಸಿದ್ದಾರೆ.
ಘಟನೆ ಹಿನ್ನೆಲೆ ಹೀಗಿದೆ..
ಗಿರೀಶ್ ಎಂಬವ ಯುವಕ ಇತ್ತೀಚೆಗೆ ತನ್ನ ಸಂಬಂಧಿಕರಾದ ನಂದೀಶ್ ಎಂಬುವರ ಹಿರಿಮಗಳು ಚಂದನಾಳನ್ನು ವಿವಾಹವಾಗಲು ಕೇಳಿದ್ದ. ಆದರೆ ಚಂದನ ಅಂತಿಮ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದರಿಂದ ಮದುವೆಗೆ ಒಪ್ಪಿರಲಿಲ್ಲ. ಬಳಿಕ ಮೇ 20ರಂದು ಮನೆಯಿಂದಲೇ ನಂದೀಶ್ ಎರಡನೇ ಮಗಳು ರಕ್ಷಿತಾ ನಾಪತ್ತೆಯಾಗಿ ವಾಪಸ್ಸಾಗಿದ್ದಳು. ಆ ಬಳಿಕ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದಳು.
ಮತ್ತೆ ಆಗಸ್ಟ್ 9 ರಿಂದ ಮತ್ತೊಮ್ಮೆ ಕಾಣೆಯಾಗಿದ್ದಾಳೆ. ಹಿರಿಮಗಳು ಚಂದನಾ ಮದುವೆಗೆ ಒಪ್ಪಲಿಲ್ಲವೆಂದು ಕಿರಿಮಗಳನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ ರಕ್ಷಿತಾ ನಾಪತ್ತೆಯಾದ ಬಳಿಕ ಆಕೆಯ ಪ್ರೇಮ ಪ್ರಕರಣ ಬೆಳಕಿಗೆ ಬಂದಿದೆ.
ಶ್ರೀರಂಗಪಟ್ಟಣ ಕೂಡಲಕುಪ್ಪೆ ಗ್ರಾಮದ ವೆಂಕಟೇಶ್ ಎಂಬ ಯುವಕ ರಕ್ಷಿತಾಳನ್ನು ಮದುವೆಯಾಗಲು ಕೇಳಿದ್ದರು. ಆದರೆ ಮಗಳು ಅಪ್ರಾಪ್ತಳು ಎಂಬ ಕಾರಣಕ್ಕೆ ಮದುವೆಗೆ ಪೋಷಕರು ನಿರಾಕರಿಸಿದ್ದರು. ಇದೇ ವಿಚಾರ ಇಟ್ಟುಕೊಂಡು ಗಿರೀಶ್ ವೆಂಕಟೇಶ್ ಜೊತೆ ಮದುವೆ ಮಾಡಿಸುವುದಾಗಿ ಪುಸಲಾಯಿಸಿ ರಕ್ಷಿತಾಳನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಆಕೆಯ ಪೋಷಕರು ಆರೋಪಿಸಿದ್ದರು.
ಆದ್ರೆ ರಕ್ಷಿತಾಳನ್ನು ವೆಂಕಟೇಶ್ ಜೊತೆ ಮದುವೆ ಮಾಡಿಸಿದ್ದಾನೋ ಅಥವಾ ತಾನೇ ಮದುವೆಯಾಗಿದ್ದಾನೋ ಎಂಬುದು ಗೊತ್ತಿಲ್ಲ ಎಂದು ಪೋಷಕರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ದ್ವಂದ್ವಕ್ಕೆ ಸಿಲುಕಿರುವ ಪ್ರಕರಣವನ್ನು ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆ ಪೊಲೀಸರೇ ಬಗೆಹರಿಸಬೇಕಿದೆ.