ಬೆಂಗಳೂರು:ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ವಂಚನೆ ಪ್ರಕರಣದಲ್ಲಿ ಬೆಂಗಳೂರಿನ ವಿಶೇಷ ಸಿಬಿಐ ನ್ಯಾಯಾಲಯ ಕಾಂಗ್ರೆಸ್ ಮುಖಂಡ ಕೆಬ್ಬಳ್ಳಿ ಆನಂದ್ ಸೇರಿದಂತೆ ಐದು ಜನ ಆರೋಪಿಗಳಿಗೆ 7 ವರ್ಷ ಕಠಿಣ ಶಿಕ್ಷೆ ಮತ್ತು 5 ಕೋಟಿ ರೂ.ದಂಡ ವಿಧಿಸಿ ತೀರ್ಪು ನೀಡಿದೆ.
ಕಾಂಗ್ರೆಸ್ ಮುಖಂಡ ಕೆಬ್ಬಳ್ಳಿ ಆನಂದ್, ಹೆಚ್.ಎಸ್.ನಾಗಲಿಂಗಸ್ವಾಮಿ, ಚಂದ್ರಶೇಖರ್, ಮೂಡಾದ ಪ್ರಥಮ ದರ್ಜೆ ಸಹಾಯಕರಾಗಿದ್ದ ಹೆಚ್.ಕೆ.ನಾಗರಾಜ, ಕೆ.ಬಿ.ಹರ್ಷನ್ ಕಠಿಣ ಶಿಕ್ಷೆಗೆ ಒಳಗಾದ ಆಪಾದಿತರು. ಸಿಬಿಐ ನ್ಯಾಯಾಲಯ ಈ ಆಪಾದಿತರಿಗೆ ಕಠಿಣ ಶಿಕ್ಷೆ ಜೊತೆಗೆ ತಲಾ ಒಂದು ಕೋಟಿ ರೂ.ದಂಡ ವಿಧಿಸಿದೆ.
ಏನಿದು ಪ್ರಕರಣ?:ಅಪರಾಧಿಗಳು ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ 2013ರಲ್ಲಿ ತಲಾ ಒಂದು ಕೋಟಿ ರೂ. ಮೊತ್ತದ ವೋಚರ್ ಮತ್ತು ಚೆಕ್ಗಳನ್ನು ಮೋಸದಿಂದ ತುಂಬಿ ಮಂಡ್ಯದ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ಠೇವಣಿ ಇರಿಸಿದ್ದರು. ನಂತರ ಆ ಹಣವನ್ನು ಚಂದ್ರಶೇಖರ್ ಅವರಿಗೆ ಸೇರಿದ ಆಕಾಶ್ ಎಂಟರ್ ಪ್ರೈಸಸ್ ನ ಖಾತೆಗೆ ವರ್ಗಾಯಿಸಿಕೊಂಡು ಮೂಡಾಕ್ಕೆ ಹಣ ಮರಳಿಸದೆ ವಂಚನೆ ಎಸಗಿದ ಆರೋಪ ಎದುರಿಸುತ್ತಿದ್ದರು.
ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಈ ಹಗರಣ ವಿಧಾನಸಭೆ ಅಧಿವೇಶನದಲ್ಲಿ ಸೇರಿದಂತೆ ಸಾರ್ವಜನಿಕವಾಗಿ ಬಹಳಷ್ಟು ಚರ್ಚೆಗೆ ಒಳಗಾಗಿದ್ದಾಗ ಆಗ ಮುಖ್ಯಮಂತ್ರಿಯಾಗಿದ್ದ ಈಗಿನ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಈ ಪಕ್ರರಣವನ್ನು ಸಿಬಿಐ ತನಿಖೆಗೆ ವಹಿಸಿದ್ದರು.