ಮಂಡ್ಯ :ನಾನು ಈ ಊರಿಗೆ ಬಂದಾಗ ಸಂಸದೆ ಅಲ್ಲ, ಸೊಸೆ ಅಷ್ಟೇ.. ನಿಮ್ಮೆಲ್ಲರ ಆಶೀರ್ವಾದದಿಂದ ಸಂಸದೆಯಾಗಿದ್ದೀನಿ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದರು.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಅಂಬಿ ಹುಟ್ಟೂರು ದೊಡ್ಡರಸಿನಕೆರೆ ಗ್ರಾಮಕ್ಕೆ ಆಗಮಿಸಿದ ಸುಮಲತಾ ಅಂಬರೀಶ್, ಕ್ಯಾತಮ್ಮ ದೇವಿ ಹಬ್ಬದ ಅಂಗವಾಗಿ ದೇವರ ದರ್ಶನ ಪಡೆದರು.
12 ವರ್ಷಗಳಿಗೊಮ್ಮೆ ನಡೆಯುವ ಹಬ್ಬದಲ್ಲಿ ಪಾಲ್ಗೊಂಡ ಸಂಸದೆ ವೇದಿಕೆಯಲ್ಲಿ ಮಾತನಾಡಿ, ದೇವರು ಎಲ್ಲರ ಸಂಕಷ್ಟ ದೂರ ಮಾಡಲಿ ಎಂದು ಆಶಿಸಿದರು. ದೊಡ್ಡರಸಿನಕೆರೆಗೆ ಬಂದಾಗ ನಾನು ಹೆಚ್ಚು ಮಾತನಾಡಲ್ಲ. ನೀವು ಮಾತಾಡಬೇಕು, ನಾನು ಕೇಳಬೇಕು. ನೀವು ಆದೇಶ ಕೊಡಬೇಕು, ನಾನು ಪಾಲಿಸಬೇಕು ಎಂದರು.
ಕೊರೊನಾ ಜಾಗೃತಿ ಮೂಡಿಸಿದ ಸಂಸದೆ :ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮಾರಸಿಂಗನಹಳ್ಳಿಯಲ್ಲಿ ಕದಗಾರ್ ಗೂಳೇಶ್ವರಸ್ವಾಮಿ ದೇವಸ್ಥಾನದ ಕಳಸ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಬಂದಿದ್ದ ಸುಮಲತಾ ಅವರು, ಮಾಸ್ಕ್ ಹಾಕಿಕೊಳ್ಳದೆ ಇರುವವರಿಗೆ ಜಾಗೃತಿ ಮೂಡಿಸಿದರು.