ಕರ್ನಾಟಕ

karnataka

ETV Bharat / state

ಅನಾರೋಗ್ಯಕ್ಕೆ ಒಳಗಾಗಿದ್ದ ಪತಿ ಕಾಲು ಕತ್ತರಿಸಿ ಪತ್ನಿಗೆ ನೀಡಿದ ಆಸ್ಪತ್ರೆ ಸಿಬ್ಬಂದಿ - ಈಟಿವಿ ಭಾರತ ಕನ್ನಡ ನ್ಯೂಸ್

ಗ್ಯಾಂಗ್ರೀನ್​ಗೆ ಒಳಗಾಗಿದ್ದ ವ್ಯಕ್ತಿಯ ಕಾಲನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಕತ್ತರಿಸಿ, ಬಳಿಕ ಅದನ್ನು ವ್ಯಕ್ತಿಯ ಪತ್ನಿಗೆ ನೀಡಿ ಮಣ್ಣು ಮಾಡುವಂತೆ ಹೇಳಿರುವ ಘಟನೆ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

mandya-mims-hospital-staffs-dilemma
ಅನಾರೋಗ್ಯಕ್ಕೆ ಒಳಗಾಗಿದ್ದ ಪತಿಯ ಕಾಲನ್ನು ಕತ್ತರಿಸಿ ಪತ್ನಿಗೆ ನೀಡಿದ ಆಸ್ಪತ್ರೆಯ ಸಿಬ್ಬಂದಿಗಳು

By

Published : Sep 6, 2022, 6:41 PM IST

Updated : Sep 6, 2022, 7:24 PM IST

ಮಂಡ್ಯ : ಸದಾ ಎಡವಟ್ಟುಗಳಿಂದಲೇ ಸುದ್ದಿಯಾಗುತ್ತಿರುವ ಮಂಡ್ಯ ಮೆಡಿಕಲ್ ಕಾಲೇಜಿನಲ್ಲಿ ಇದೀಗ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಅನಾರೋಗ್ಯಕ್ಕೆ ಒಳಗಾಗಿದ್ದ ಪತಿಯ ಕಾಲನ್ನು ಕತ್ತರಿಸಿ ಪತ್ನಿಗೆ ನೀಡಿರುವ ಘಟನೆಯೊಂದು ಜಿಲ್ಲೆಯ ಮಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

ಗ್ಯಾಂಗ್ರೀನ್‌ಗೆ ಒಳಗಾಗಿದ್ದ ಜಿಲ್ಲೆಯ ಕೀಲಾರ ಗ್ರಾಮದ ಪ್ರಕಾಶ್ ಎಂಬವರು ತಮ್ಮ ಚಿಕಿತ್ಸೆಗಾಗಿ ಮಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ನೀಡಿದ ವೈದ್ಯರು ಗ್ಯಾಂಗ್ರೀನ್‌ಗೆ ಒಳಗಾಗಿದ್ದ ಕಾಲನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆದಿದ್ದರು. ಅದಾದ ಬಳಿಕ ಆಸ್ಪತ್ರೆ ಸಿಬ್ಬಂದಿ ಕತ್ತರಿಸಲಾಗಿದ್ದ ಕಾಲನ್ನು ತಂದು ಪ್ರಕಾಶ್ ಅವರ ಪತ್ನಿ ಭಾಗ್ಯಮ್ಮ ಅವರಿಗೆ ನೀಡಿದ್ದಾರೆ. ಇದನ್ನು ಕಂಡು ತಬ್ಬಿಬ್ಬಾಗಿದ್ದ ಭಾಗ್ಯಮ್ಮ, ಏನು ಮಾಡಬೇಕೆಂದು ತೋಚದೇ ಗಂಡನ ಕಾಲನ್ನು ಹಿಡಿದು ಕಣ್ಣೀರಿಟ್ಟಿದ್ದಾರೆ.

ಅನಾರೋಗ್ಯಕ್ಕೆ ಒಳಗಾಗಿದ್ದ ಪತಿ ಕಾಲು ಕತ್ತರಿಸಿ ಪತ್ನಿಗೆ ನೀಡಿದ ಆಸ್ಪತ್ರೆ ಸಿಬ್ಬಂದಿ

ಆಸ್ಪತ್ರೆಗೆ ದಾಖಲಾದ ಮೂರು ದಿನಗಳ ಬಳಿಕ ಕಾಲನ್ನು ಕತ್ತರಿಸಿದ ಆಸ್ಪತ್ರೆ ಸಿಬ್ಬಂದಿ, ಬಳಿಕ ಇದನ್ನು ಎಲ್ಲಾದರೂ ತೆಗೆದುಕೊಂಡು ಹೋಗಿ ಮಣ್ಣು ಮಾಡುವಂತೆ ಭಾಗ್ಯಮ್ಮನಿಗೇ ಹೇಳಿದ್ದಾರೆ ಎನ್ನಲಾಗಿದೆ. ತಾವೇ ಮಣ್ಣು ಮಾಡಿದರೆ ಸಾವಿರಾರು ರೂಪಾಯಿ ನೀಡಬೇಕು ಎಂದು ಆಸ್ಪತ್ರೆಯವರು ಕೇಳಿದ್ದಾರೆ ಎಂದು ಭಾಗ್ಯಮ್ಮ ಆರೋಪಿಸಿದ್ದು, ಮಿಮ್ಸ್ ಸಿಬ್ಬಂದಿ ನಡೆ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ :ಸಮಯಕ್ಕೆ ಸರಿಯಾಗಿ ಬಾರದ ಆ್ಯಂಬುಲೆನ್ಸ್..​ ಹಾರಿ ಹೋಯಿತು ವೃದ್ದನ ಜೀವ

Last Updated : Sep 6, 2022, 7:24 PM IST

ABOUT THE AUTHOR

...view details