ಮಂಡ್ಯ: ರೈತರಿಂದ ಖರೀದಿಸುವ ಹಾಲಿಗೆ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್ಮುಲ್) ಲೀಟರ್ ಗೆ 1 ರೂ. ಕಡಿತ ಮಾಡಿ ಆದೇಶ ಹೊರಡಿಸಿದೆ. ಮೇ.26ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿದ್ದು, ಜೂ.1 ರಿಂದ ಮುಂದಿನ ಆದೇಶದವರೆಗೆ ಈ ನೂತನ ದರ ಪರಿಷ್ಕರಣೆ ಮುಂದುವರಿಯುತ್ತದೆ ಎಂದು ಮನ್ಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಪಿ.ಆರ್ ಮಂಜೇಶ್ ಸುತ್ತೋಲೆ ಹೊರಡಿಸಿದ್ದಾರೆ.
ಜಿಲ್ಲಾ ಹಾಲು ಒಕ್ಕೂಟ ದಿನಂಪ್ರತಿ 9,38,035 ಲೀಟರ್ ಹಾಲನ್ನು ಸಂಗ್ರಹಿಸುತ್ತಿದೆ. ಬೇಸಿಗೆ ಕಾಲದಲ್ಲಿ ಹಸಿರು ಮೇವಿನ ಕೊರತೆಯಿಂದ ಉತ್ಪಾದಕರ ನೆರವಿಗೆ ಧಾವಿಸುವ ನಿಟ್ಟಿನಲ್ಲಿ ಪ್ರತಿ ಲೀಟರ್ ಹಾಲಿಗೆ 2 ರೂ. ಹೆಚ್ಚುವರಿಯಾಗಿ ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ಸದ್ಯ ನೂತನ ದರದಂತೆ ಸಂಘಗಳಿಗೆ ಶೇ 4.0 ಜಿಡ್ಡು ಮತ್ತು ಶೇ 8.5 ಜಿಡ್ಡೇತರ ಘನಾಂಶಕ್ಕೆ 33.15 ರೂ. ಬದಲು 32.15 ರೂ ಹಾಗೂ ಉತ್ಪಾದಕರಿಗೆ 32.25 ರೂ ಬದಲು 31.25 ರೂ. ನಿಗದಿಗೊಳಿಸಲಾಗಿದೆ.
ಒಕ್ಕೂಟದ ವ್ಯಾಪ್ತಿಯಲ್ಲಿ ಮುಂಗಾರು ಪೂರ್ವ ಮಳೆ ಅರಂಭವಾಗಿದ್ದು, ಹಸಿರು ಮೇವಿನ ಲಭ್ಯತೆ ಸುಧಾರಿಸಿದೆ. ಹೀಗಾಗಿ ದರ ಕಡಿತ ಮಾಡಲಾಗಿದೆ ಎಂದು ಮನ್ಮುಲ್ ಆಡಳಿತ ಮಂಡಳಿ ದರ ಇಳಿಕೆಗೆ ಸಮರ್ಥನೆ ನೀಡಿದೆ.
ಇದನ್ನೂ ಓದಿ:ರೈತರಿಂದ ಖರೀದಿ ಮಾಡ್ತಿದ್ದ ಹಾಲಿನ ದರ ಇಳಿಕೆ.. ಮನ್ಮುಲ್ಗೆ ಎಚ್ಚರಿಕೆಯ ಸಂದೇಶ ರವಾನಿಸಿದ ಅನ್ನದಾತರು
ನಂದಿನಿ vs ಅಮುಲ್ ವಿವಾದ:ಕರ್ನಾಟಕದಲ್ಲಿ ಇತ್ತೀಚೆಗೆ ನಂದಿನಿ-ಅಮುಲ್ ಮಧ್ಯೆ ಪೈಪೋಟಿ ನಡೆದಿತ್ತು. ರಾಜ್ಯದಲ್ಲಿ ಅಮುಲ್ ಹಾಲು ಮಾರಾಟ ಮಾಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ, ಅದರಲ್ಲೂ ಮುಖ್ಯವಾಗಿ ರಾಜಕೀಯವಾಗಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್) ದೇಶದ 2ನೇ ಅತೀ ದೊಡ್ಡ ಸಹಕಾರ ಹಾಲು ಮಹಾಮಂಡಳ ಸಂಸ್ಥೆ. ಗುಜರಾತ್ ಮೂಲದ ಅಮುಲ್ ದೇಶದ ಅಗ್ರಗಣ್ಯ ಸಹಕಾರ ಹಾಲು ಮಹಾಮಂಡಳಿ. ಈ ಎರಡೂ ಬ್ರಾಂಡ್ಗಳ ಹಾಲಿನ ವಿಚಾರ ರಾಜ್ಯದಲ್ಲಿ ಸಂಘರ್ಷ ಉಂಟು ಮಾಡಿತ್ತು. ಅದರಲ್ಲಿಯೂ ಚುನಾವಣೆ ಹೊಸ್ತಿಲಲ್ಲಿ ಹಾಲಿನ ಹೋರಾಟಕ್ಕೆ ರಾಜಕೀಯ ಹುಳಿಯೂ ಬೆರೆತಿತ್ತು. ಗುಜರಾತ್ ಮೂಲದ ಅಮುಲ್ ರಾಜ್ಯದಲ್ಲಿ ಹಾಲು ಮಾರಾಟ ಮಾಡುತ್ತಿರುವುದು ಈಗ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ:ನಂದಿನಿ ಹಾಲಿನ ಬಗ್ಗೆ ಸುಳ್ಳು ಸುದ್ದಿ ಹರಿದಾಡುತ್ತಿದ್ದು ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ: ಕೆಎಂಎಫ್ ಸ್ಪಷ್ಟನೆ
ಸಾಮಾಜಿಕ ಜಾಲತಾಣದಲ್ಲಿ ಬಾಯ್ಕಾಟ್ ಅಮುಲ್ ಅಭಿಯಾನ ಆರಂಭಿಸಲಾಗಿತ್ತು. ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ವಿವಾದವನ್ನು ರಾಜಕೀಯ ದಾಳವಾಗಿ ಬಳಸಲು ಆರಂಭಿಸಿದ್ದವು. ಕನ್ನಡದ ಹೆಮ್ಮೆಯ ನಂದಿನಿಯನ್ನು ಮುಚ್ಚುವ ಪ್ರಯತ್ನ ಎಂಬುದು ಆರೋಪವಾಗಿತ್ತು. ಈ ವಿಚಾರ ಪ್ರತಿಪಕ್ಷ ಹಾಗೂ ಆಡಳಿತಾರೂಢ ಬಿಜೆಪಿ ಮಧ್ಯೆ ತೀವ್ರ ಗಲಾಟೆಗೆ ಕಾರಣವಾಗಿತ್ತು.
ಇದನ್ನೂ ಓದಿ:ನಂದಿನಿ vs ಅಮುಲ್: ವಿವಾದವೇಕೆ? ವಾಸ್ತವ ಏನು?