ಮಂಡ್ಯ:ರಾಜ್ಯದ ಎಲ್ಲ ಅಣೆಕಟ್ಟೆಗಳು ತುಂಬಿ ತುಳುಕುತ್ತಿವೆ. ಆದರೆ ಜೀವನದಿ ಕಾವೇರಿಗೆ ನಿರ್ಮಾಣ ಮಾಡಿರುವ ಕೃಷ್ಣರಾಜಸಾಗರ ಅಣೆಕಟ್ಟೆ ಇನ್ನೂ ಅರ್ಧ ಭಾಗವೂ ತುಂಬಿಲ್ಲ. ಹೀಗೆಂದರೆ ನಿಮಗೆ ಅಚ್ಚರಿ ಆಗಬಹುದು, ಆದರೂ ಇದು ಸತ್ಯ.
ಅತ್ತ ಅಬ್ಬರಿಸಿ ಬೊಬ್ಬಿರಿಯುತ್ತಿದೆ ಕೃಷ್ಣೆ... ಇತ್ತ ಅರ್ಧವೂ ತುಂಬಿಲ್ಲ ಕೆಆರ್ಎಸ್: ಅಚ್ಚರಿ ಆದರೂ ಇದು ಸತ್ಯ..! - ಕೆಆರ್ಎಸ್
ರಾಜ್ಯದಲ್ಲಿನ ಎಲ್ಲ ಡ್ಯಾಮ್ಗಳು ತುಂಬಿದ್ದು, ಪ್ರವಾಹ ಉಂಟಾಗಿದೆ. ಆದರೆ ಮಂಡ್ಯದ ಕೆಆರ್ಎಸ್ ಅಣೆಕಟ್ಟೆ ಮಾತ್ರ ಇನ್ನೂ ಅದರ ಅರ್ಧ ಭಾಗದಷ್ಟೂ ತುಂಬಿಲ್ಲ.
ಸದ್ಯಕ್ಕೆ ಕೆಆರ್ಎಸ್ನಲ್ಲಿ 93.50 ಅಡಿಯಷ್ಟು ನೀರು ತುಂಬಿದೆ. ಅಣೆಕಟ್ಟೆಯ ಗರಿಷ್ಠ ಮಟ್ಟ 124.80 ಅಡಿಗಳು ಅಷ್ಟೆ. ಅಣೆಕಟ್ಟೆ ತುಂಬಲು ಕೇವಲ 31.3 ಅಡಿಯಷ್ಟು ನೀರು ಸಾಕು. ಆದರೂ ಎತ್ತರದಲ್ಲಿ ಅರ್ಧಕ್ಕೂ ಹೆಚ್ಚು ತುಂಬಿದರೂ ಪ್ರಮಾಣದಲ್ಲಿ ಇನ್ನೂ 40% ತುಂಬಿಲ್ಲ. ಹೌದು... ಕೆಆರ್ಎಸ್ನ ಮಿತಿ 49.45 ಟಿಎಂಸಿ ನೀರು. ಆದರೆ ಈಗ ತುಂಬಿರುವುದು ಕೇವಲ 18.133 ಟಿಎಂಸಿ ಮಾತ್ರ. ಮಿತಿಯನ್ನು ತಾಳೆ ಮಾಡಿದರೆ ಅಣೆಕಟ್ಟೆ ತುಂಬಿರುವುದು ಕೇವಲ 36.66% ಮಾತ್ರ. ಅಣೆಕಟ್ಟೆ 112 ಅಡಿ ನೀರು ತುಂಬಿದರೆ ಅರ್ಧ ತುಂಬಿದಂತೆ.
ಸದ್ಯಕ್ಕೆ ಒಳಹರಿವಿನ ಪ್ರಮಾಣ 37,375 ಕ್ಯೂಸೆಕ್ ಇದ್ದು, ಹೊರಹರಿವಿನ ಪ್ರಮಾಣ 421ಕ್ಯೂಸೆಕ್ ಇದೆ. ಹೀಗಾಗಿ ಅಣೆಕಟ್ಟೆ ತುಂಬದೇ ಇರೋದು ರೈತರ ಆತಂಕಕ್ಕೆ ಕಾರಣವಾಗಿದೆ. ಮಡಿಕೇರಿಯಲ್ಲಿ ಸಾಕಷ್ಟು ಮಳೆ ಆಗುತ್ತಿದೆ. ಹಾರಂಗಿಯಿಂದಲೂ ನೀರು ಬಿಡಲಾಗುತ್ತಿದೆ. 50 ಸಾವಿರ ಕ್ಯೂಸೆಕ್ ನೀರು ಒಂದು ವಾರಗಳ ಕಾಲ ಜಲಾಶಯಕ್ಕೆ ಹರಿದು ಬಂದರೆ ಆಗ ಅಣೆಕಟ್ಟೆ ಭರ್ತಿಯಾಗಲಿದೆ.