ಕರ್ನಾಟಕ

karnataka

ETV Bharat / state

ಮಂಡ್ಯದಲ್ಲಿ ಕಾವೇರಿ ಹೋರಾಟ ತೀವ್ರ: ನಾಳೆ ಕೆ.ಆರ್.ಪೇಟೆ ಬಂದ್​ ಕರೆ - ಮಂಡ್ಯ

ಮಂಡ್ಯದಲ್ಲಿ ಕಾವೇರಿ ನೀರಿಗಾಗಿ ನಡೆಯುತ್ತಿರುವ ಪ್ರತಿಭಟನೆ, ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು ನಾಳೆ ಬಂದ್​​ಗೆ ಕರೆ ನೀಡಲಾಗಿದೆ.

ಹೋರಾಟ
ಹೋರಾಟ

By ETV Bharat Karnataka Team

Published : Sep 25, 2023, 7:12 AM IST

Updated : Sep 25, 2023, 10:14 AM IST

ಮಂಡ್ಯ ಕಾವೇರಿ ಹೋರಾಟ

ಮಂಡ್ಯ :ಸಕ್ಕರೆ ನಗರಿ ಮಂಡ್ಯದಲ್ಲಿ ಕಾವೇರಿ ಕಿಚ್ಚು ತೀವ್ರ ಸ್ವರೂಪದಲ್ಲಿ ವ್ಯಾಪಿಸುತ್ತಿದೆ. ಸುಪ್ರೀಂ ಕೋರ್ಟ್ ಆದೇಶಕ್ಕೆ ಅಸಮಾಧಾನ ವ್ಯಕ್ತಪಡಿಸಿ ಸೆಪ್ಟೆಂಬರ್ 26ರಂದು (ನಾಳೆ) ಜಿಲ್ಲೆಯ ಕೆ.ಆರ್.ಪೇಟೆ ಬಂದ್​ಗೆ ಕರೆ ನೀಡಲಾಗಿದೆ. ಕಾವೇರಿ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ. ಬೆಳಗ್ಗೆ 8ರಿಂದ ಸಂಜೆ 6ರವರೆಗೆ ಜನಜೀವನ ಸ್ಥಗಿತಗೊಳ್ಳಲಿದೆ. ಅಗತ್ಯಸೇವೆ ಹೊರತುಪಡಿಸಿ ಉಳಿದೆಲ್ಲ ಸೇವೆಗಳು ಬಂದ್‌ ಆಗಲಿದೆ.

ಭಾನುವಾರ ಕೂಡ ಮಂಡ್ಯದಲ್ಲಿ ಸಾಕಷ್ಟು ಪ್ರತಿಭಟನೆಗಳು ನಡೆದವು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ಮಂಡ್ಯದ ಸಂಜಯ ಸರ್ಕಲ್​ನಲ್ಲಿ ಕಾವೇರಿ ನದಿ ನೀರಿನ ರಕ್ಷಣಾ ಹೋರಾಟ ಸಮಿತಿ ಕಾರ್ಯಕರ್ತರು ಪ್ರತಿಭಟಿಸಿದರು. ಸಂಜಯ ಸರ್ಕಲ್​ನಲ್ಲಿ ಖಾಲಿ ಬಿಂದಿಗೆ ಪ್ರದರ್ಶಿಸಿ, ರಸ್ತೆಯಲ್ಲೇ ಮಲಗಿ ಬೆಂಗಳೂರು-ಮೈಸೂರು ಹೆದ್ದಾರಿ ತಡೆದರು.

ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕಾರ್ಯಕರ್ತರ ಪ್ರತಿಭಟನೆ ಮುಂದುವರೆಯಿತು. ಶಾಸಕ ದರ್ಶನ್ ಪುಟ್ಟಣ್ಣಯ್ಯ, ನರೇಂದ್ರಸ್ವಾಮಿ ಸಾಥ್ ನೀಡಿದರು. ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, "ನೀರಿನ ವಿಚಾರವಾಗಿ ಸಿಎಂ ಅವರನ್ನು ಭೇಟಿ ಮಾಡಿದ್ದೇವೆ. ನೀರು ನೀಡುತ್ತಿರುವುದು ನಿಲ್ಲಿಸುತ್ತೇವೆ ಎಂದಿದ್ದಾರೆ" ಎಂದು ತಿಳಿಸಿದರು.

ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆ.ಆರ್.ಎಸ್.ಜಲಾಶಯದಲ್ಲಿ ಸದ್ಯ 96.80 ಅಡಿ ನೀರಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಜಲಾಶಯದಿಂದ ಕಾವೇರಿ ನದಿಗೆ 3,838 ಕ್ಯೂಸೆಕ್ ನೀರು ಬಿಡಲಾಗಿದೆ. ಇದು ಆಕ್ರೋಶಕ್ಕೆ ಕಾರಣವಾಗಿದೆ.

ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇ ಗೌಡ ಬಣ ಆನೇಕಲ್​ನಿಂದ ತಮಿಳುನಾಡಿನ ಸೋಲೂರು ಗಡಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ರಸ್ತೆಯಲ್ಲಿ ಉರುಳಾಡಿ ಕಾವೇರಿ ನೀರನ್ನು ಕರ್ನಾಟಕಕ್ಕೆ ಉಳಿಸಿಕೊಳ್ಳಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಸರ್ಕಾರ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ತಕರಾರಿಲ್ಲದೆ ಬಿಡುತ್ತಿರುವುದನ್ನು ತೀವ್ರವಾಗಿ ಕರವೇ ಕಾರ್ಯಕರ್ತರು ದಿಕ್ಕಾರ ಕೂಗುವ ಮುಖಾಂತರ ಪ್ರಶ್ನಿಸಿದರು.

ರಾಜ್ಯ ರಾಜಕೀಯ ದಾಳಕ್ಕೆ ರೈತರ ಹಾಗು ಕನ್ನಡಿಗರ ಎದೆ ಮೇಲೆ ಕಾಲಿಟ್ಟು ಸಂಸದರ ಚುನಾವಣೆ ನೆಪದಲ್ಲಿ ಹೈಡ್ರಾಮ ಆಡುತ್ತಿರುವುದು ರಾಜ್ಯದ ಜನತೆಗೆ ಗೊತ್ತಿದೆ. ನಿಷ್ಠ ವಕೀಲರ ಮುಖಾಂತರ ಕಾವೇರಿ ನೀರಿಗೆ ವಾದ ಮಂಡಿಸುವಲ್ಲಿ ರಾಜ್ಯ ಸರ್ಕಾರ ಸೋತಿದೆ. ಇದು ರಾಜ್ಯದ ದುರಂತ ಎಂದು ಕಿಡಿ ಕಾರಿದರು.

ಇದನ್ನೂ ಓದಿ :ಬೆಂಗಳೂರು ಬಂದ್​ ಮಾಡುವ ಸಂಘಟನೆಗಳಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದೇನು?

Last Updated : Sep 25, 2023, 10:14 AM IST

ABOUT THE AUTHOR

...view details