ಮಂಡ್ಯ: ಮಳವಳ್ಳಿ ತಾಲೂಕಿನ ಕುಂದನ ಬೆಟ್ಟದಲ್ಲಿ 17 ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿ ಆಧುನಿಕ ಭಗೀರಥ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಪ್ರಶಂಸೆ ಪಡೆದಿದ್ದ ದಾಸನದೊಡ್ಡಿಯ ಕೆರೆ ಕಾಮೇಗೌಡ (84) ಇಂದು ಬೆಳಗಿನ ಜಾವ 4 ಗಂಟೆಗೆ ಅನಾರೋಗ್ಯದಿಂದ ನಿಧನರಾದರು.
ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ. ಇಂದು ಮಧ್ಯಾಹ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ಕೆರೆ ಕಾಮೇಗೌಡರ ಅಂತ್ಯಕ್ರಿಯೆ ನಡೆಯಲಿದೆ.
ಪ್ರಧಾನಿ ಮೋದಿ ಶ್ಲಾಘನೆ: ದಾಸನದೊಡ್ಡಿಯ ಕಾಮೇಗೌಡರು ತಮ್ಮ ಸ್ವಂತ ಹಣದಿಂದ ಮಳವಳ್ಳಿ ತಾಲೂಕಿನ ಕುಂದನ ಬೆಟ್ಟದಲ್ಲಿ 17 ಕೆರೆಗಳನ್ನು ನಿರ್ಮಿಸಿ ಅಂತರ್ಜಲ ವೃದ್ಧಿಗೆ ಕಾರಣವಾಗಿದ್ದಲ್ಲದೇ, ಪ್ರಾಣಿ-ಪಕ್ಷಿಗಳಿಗೆ, ಜನ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವ ಮೂಲಕ ಮಾದರಿ ಕೆಲಸ ಮಾಡಿದ್ದರು. ಈ ಕಾರಣದಿಂದಲೇ ಅವರು ಕೆರೆ ಕಾಮೇಗೌಡ ಎಂದು ಹೆಸರು ವಾಸಿಯಾಗಿದ್ದರು. ಅಂತರ್ಜಲ ವೃದ್ಧಿಯಲ್ಲಿ ದೇಶದ ಗಮನ ಸೆಳೆದು 17 ಕೆರೆಗಳನ್ನು ನಿರ್ಮಿಸಿದ್ದ ಕೆರೆ ಕಾಮೇಗೌಡರ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಮನ್ ಕಿ ಬಾತ್ ನಲ್ಲಿ ಆಧುನಿಕ ಭಗೀರಥ ಮಾದರಿಯಲ್ಲಿ ಕಾಮೇಗೌಡರು ಮಾಡಿರುವ ಜಲಯಜ್ಞದಿಂದ ಸಾವಿರಾರು ಮಂದಿ ಪ್ರತಿಫಲ ಪಡೆದಿದ್ದಾರೆ. ಇಂತಹವರು ದೇಶದಲ್ಲಿ ಇರುವುದು ನಿಜಕ್ಕೂ ಪುಣ್ಯ. ಕೆರೆ- ಕಾಲುವೆ ನಿರ್ಮಿಸಿ ಜನ-ಜಾನುವಾರುಗಳಿಗೆ ನೀರು ಕೊಟ್ಟಿದ್ದಾರೆ. ಇವರ ಸೇವೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.