ಮಂಡ್ಯ :ಮಂಡ್ಯದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಡಾ.ನಟರಾಜ್ ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಆತ್ಮಹತ್ಯೆಗೆ ಮೇಲಧಿಕಾರಿಗಳ ಕಿರುಕುಳ ಕಾರಣ ಎಂದು ಆರೋಪ ಕೇಳಿಬಂದಿತ್ತು. ಈ ಸಂಬಂಧ ಮಂಡ್ಯ ಡಿಹೆಚ್‌ಒ ಡಾ. ಮೋಹನ್ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಮೋಹನ್ ಅವರು, ಡಾ. ನಟರಾಜ್ ಕುಣಿಗಲ್ ತಾಲೂಕಿನ ಚೌಡನಕುಪ್ಪೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಮಂಡ್ಯದ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಯಾಗಿ ವರ್ಗಾವಣೆಗೊಂಡಿದ್ದರು. ಅಧಿಕಾರ ವಹಿಸಿಕೊಂಡು ಮೂರು ತಿಂಗಳು ಆಗಿದೆ. ಆದರೆ, ಇವರು ಕೆಲಸ ಮಾಡಿರುವುದು ಎರಡು ತಿಂಗಳು ಮಾತ್ರ. ಇದರಲ್ಲೂ ಆರೋಗ್ಯ ಸಮಸ್ಯೆ ಎಂದು 30 ದಿನಗಳ ಕಾಲ ರಜೆ ಹಾಕಿದ್ದರು. ಕೌಟುಂಬಿಕ ಕಲಹದಿಂದಾಗಿ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರಿಗೆ ಹೆಚ್ಚಿನ ಕಾರ್ಯ ಒತ್ತಡವನ್ನು ನೀಡುತ್ತಿರಲಿಲ್ಲ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ನಟರಾಜ್ ಈ ಹಿಂದೆ ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಹೇಳಿದರು.
ಕಳೆದ ನವೆಂಬರ್ 11ರಂದು ಕೌಟುಂಬಿಕ ಕಲಹ ಹಾಗೂ ಅನಾರೋಗ್ಯದಿಂದ ಕುಟುಂಬ ಕಲ್ಯಾಣ ಅಧಿಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮೊದಲು ಇದ್ದ ಚೌಡನಕುಪ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಯಾಗಿ ನೇಮಕ ಮಾಡುವಂತೆ ಸಚಿವ ಚಲುವರಾಯಸ್ವಾಮಿ ಹಾಗೂ ಡಿಹೆಚ್‌ಒಗೆ ನಟರಾಜ್ ಪತ್ರ ಬರೆದ್ದರು. ಇವರ ಸಾವಿಗೆ ಇವರ ಕೌಟುಂಬಿಕ ಕಲಹದಿಂದ ಉಂಟಾದ ಮಾನಸಿಕ ಖಿನ್ನತೆಯೇ ಕಾರಣ. ಈ ಆತ್ಮಹತ್ಯೆಗೂ ನಮಗೂ ಯಾವುದೇ ಸಂಬಂಧ ಇಲ್ಲ. ನನ್ನ ವಿರುದ್ದ ಷಡ್ಯಂತ್ರ ಮಾಡಿದ್ದಾರೆ ಎಂದು ಡಾ.ಮೋಹನ್ ಸ್ಪಷ್ಟನೆ ನೀಡಿದ್ದಾರೆ.