9 ಲಕ್ಷಕ್ಕೆ ಮಾರಾಟವಾದ ಹಳ್ಳಿಕಾರ್ ಎತ್ತು ಮಂಡ್ಯ:ಜೋಡಿ ಎತ್ತಿನ ಸ್ಪರ್ಧೆಗಾಗಿ ಮಂಡ್ಯದ ಎತ್ತು 9 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮದ ನವೀನ್ ಅವರಿಗೆ ಜೋಡಿ ಎತ್ತಿನಗಾಡಿ ರೇಸ್ ಅಂದ್ರೆ ಅಚ್ಚುಮೆಚ್ಚು. ಅದಕ್ಕಾಗಿ ಅವರು ಅತ್ಯುತ್ತಮ ತಳಿಯ ಎತ್ತುಗಳನ್ನು ಸಾಕುತ್ತಿದ್ದಾರೆ. ಕಳೆದ ಒಂದೂವರೆ ವರ್ಷದ ಹಿಂದೆ ಮಂಡ್ಯ ತಾಲೂಕಿನ ಇಂಡುವಾಳು ಗ್ರಾಮದ ಅಜಿತ್ ಎಂಬವರಿಂದ ಒಂದೂವರೆ ಲಕ್ಷ ರೂಪಾಯಿ ಕೊಟ್ಟು ಒಂದು ಎತ್ತು ಖರೀದಿಸಿದ್ದರು. ಈ ಎತ್ತಿಗೆ ವೇಗವಾಗಿ ಓಡುವ ತರಬೇತಿ ನೀಡಿದ್ದಾರೆ. ಹೀಗಾಗಿ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಕಷ್ಟು ಬಹುಮಾನಗಳನ್ನು ಗೆದ್ದಿದೆ. ರಾಜ್ಯವಲ್ಲದೇ, ಹೊರ ರಾಜ್ಯಗಳಲ್ಲೂ ಹೆಸರು ಮಾಡಿದೆ.
ಈ ಎತ್ತಿಗೆ ನವೀನ್ 'ಜಾಗ್ವಾರ್' ಎಂದು ಹೆಸರಿಟ್ಟಿದ್ದಾರೆ. ಇದೀಗ ತಮಿಳುನಾಡು ರಾಜ್ಯದ ಕೊಯಮತ್ತೂರಿನ ರೈತರೊಬ್ಬರು ಈ ಹಳ್ಳಿಕಾರ್ ತಳಿಯ ಒಂಟಿ ಎತ್ತನ್ನು 9.20 ಲಕ್ಷ ರೂ. ನೀಡಿ ಖರೀದಿಸಿದ್ದಾರೆ. ಜೋಡಿ ಎತ್ತಿನ ಗಾಡಿಯ ಸ್ಪರ್ಧೆಯಲ್ಲಿ ಈಗಾಗಲೇ ಹೆಸರು ಮಾಡಿರುವ ಎತ್ತಿಗೆ ಉತ್ತಮ ಬೆಲೆ ಸಿಕ್ಕಿದೆ.
ಬಾಗಲಕೋಟೆಯಲ್ಲಿ ₹14 ಲಕ್ಷಕ್ಕೆ ಎತ್ತು ಮಾರಾಟ:ಬಾಗಲಕೋಟೆಯ ಮುಧೋಳ ತಾಲೂಕಿನ ಮೆಟಗುಡ್ಡ ಹಲಕಿ ಗ್ರಾಮದ ರೈತ ಸಹೋದರರಾದ ಕಾಶಿಲಿಂಗಪ್ಪ ಗಡದಾರ ಹಾಗೂ ಯಮನಪ್ಪ ಗಡದಾರ ಎಂಬವರು ಒಂದು ವರ್ಷದ ಹಿಂದೆ 5 ಲಕ್ಷ ರೂಪಾಯಿಗೆ ಒಂದು ಎತ್ತು ಖರೀದಿಸಿದ್ದರು. ಮೂಡಲಗಿ ತಾಲೂಕಿನ ರಡ್ಯಾರಟ್ಟಿಯಲ್ಲಿ ಇದನ್ನು ಖರೀದಿಸಲಾಗಿತ್ತು. ಈ ಎತ್ತನ್ನು ನಂದಗಾಂವ ಗ್ರಾಮದ ವಿಠ್ಠಲ ಎಂಬವರಿಗೆ ಈ ವರ್ಷಾರಂಭದಲ್ಲಿ 14 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ.
₹10 ಲಕ್ಷಕ್ಕೆ ಸೇಲ್ ಆಗಿತ್ತು ಹಳ್ಳಿಕಾರ್ ಎತ್ತು: ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಗ್ರಾಮದ ರೈತರೊಬ್ಬರು ಸಾಕಿದ್ದ ಎತ್ತು 10 ಲಕ್ಷ 25 ಸಾವಿರ ರೂಪಾಯಿಗೆ ಮೇ ತಿಂಗಳಿನಲ್ಲಿ ಮಾರಾಟವಾಗಿತ್ತು. ಇದನ್ನು 'ಕೆಲಸಗಾರ ತಳಿ' ಎಂದೂ ಕರೆಯಲಾಗುತ್ತದೆ. ದಿನಕ್ಕೆ 40 ರಿಂದ 50 ಮೈಲಿವರೆಗೂ ವಿಶ್ರಾಂತಿ ಪಡೆಯದೆ ಕ್ರಮಿಸಬಲ್ಲದು. ಕ್ವಿಂಟಲ್‌ಗಟ್ಟಲೆ ಭಾರ ಎಳೆಯಬಲ್ಲ ಸಾಮರ್ಥ್ಯ ಇದಕ್ಕಿದೆ.
ಇದನ್ನೂ ಓದಿ:10 ಲಕ್ಷ ರೂಪಾಯಿಗೆ ಮಾರಾಟವಾದ ಹಳ್ಳಿಕಾರ್ ಎತ್ತು 'ಬ್ರಾಂಡ್ ಅಪ್ಪಣ್ಣ'!- ವಿಡಿಯೋ