ಕರ್ನಾಟಕ

karnataka

ETV Bharat / state

ಮಂಡ್ಯ: ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ನೀರಿನ ಮೊರೆ ಹೋದ ರೈತರು

ನೀರಿಲ್ಲದೆ ಒಣಗುತ್ತಿರುವ ಬೆಳೆ ಉಳಿಸಿಕೊಳ್ಳಲು ಮಂಡ್ಯದಲ್ಲಿ ರೈತರು ಹರಸಾಹಸ ಮಾಡುತ್ತಿದ್ದಾರೆ.

ಟ್ಯಾಂಕರ್ ನೀರಿನ ಮೊರೆ ಹೋದ ರೈತರು
ಟ್ಯಾಂಕರ್ ನೀರಿನ ಮೊರೆ ಹೋದ ರೈತರು

By ETV Bharat Karnataka Team

Published : Nov 9, 2023, 11:30 AM IST

Updated : Nov 9, 2023, 2:29 PM IST

ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ನೀರಿನ ಮೊರೆ ಹೋದ ರೈತರು

ಮಂಡ್ಯ:ರಾಜ್ಯದಲ್ಲಿ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ನಾಲೆಗಳು ಬತ್ತಿ ಹೋಗುತ್ತಿದ್ದು, ರೈತರು ಈ ಬಾರಿ ನೀರಿನ ಸಮಸ್ಯೆಯಿಂದ ಕಂಗಾಲಾಗಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ರೈತರು ತಾವು ಬೆಳೆದ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ನೀರಿನ ಮೊರೆ ಹೋಗಿದ್ದು, ಗದ್ದೆಗೆ ನೀರು ಹಾಯಿಸುತ್ತಿದ್ದಾರೆ.

ಕೆಆರ್​ಎಸ್​ ಡ್ಯಾಂ ಅಚ್ಚುಕಟ್ಟು ಪ್ರದೇಶದ ಕಡೇ ಭಾಗ ಕೊಪ್ಪ ಹೋಬಳಿಯಾಗಿದೆ. ಡ್ಯಾಂನಿಂದ ನಾಲೆಗೆ ನೀರು ಬಿಟ್ಟರೂ ಕೊಪ್ಪ ಹೋಬಳಿ ತಲುಪಲು 10 ರಿಂದ 12 ದಿನಗಳೇ ಬೇಕು. ನೀರು ತಲುಪಿ ಎರಡ್ಮೂರು ದಿನದಲ್ಲೇ ನಾಲೆಗಳಿಗೆ ನೀರು ಸ್ಥಗಿತವಾಗುತ್ತದೆ. ಕಟ್ಟು ಪದ್ಧತಿಯಂತೆ 15 ದಿನಗಳಿಗೆ ಅಧಿಕಾರಿಗಳು ನೀರು ನಿಲ್ಲಿಸಿದ್ದು, ಸಾಲ ಮಾಡಿ ಬೆಳೆದ ಬೆಳೆ ಒಣಗುತ್ತಿದೆ. ಇದರಿಂದ ಮಹರ್ನಾವಮಿ ದೊಡ್ಡಿ, ಗುಡಿದೊಡ್ಡಿ ಗ್ರಾಮಗಳಲ್ಲಿ ರೈತರು ಗದ್ದೆಗಳಿಗೆ 15 ದಿನಕ್ಕೊಮ್ಮೆ ಬೆಳೆಗೆ 8 ಟ್ಯಾಂಕರ್ ನೀರುಣಿಸುತ್ತಿದ್ದಾರೆ. ಸುಮಾರು 800-1,000 ರೂ ಹಣ ಖರ್ಚು ಮಾಡಿ ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದೆ.

"ತಮಿಳುನಾಡಿಗೂ ನೀರು ಕೊಡುತ್ತೇವೆ. ರೈತರ ಬೆಳೆಗೂ ಕೂಡ ನೀರು ಪೂರೈಸುತ್ತೇವೆ ಎಂಬ ಸರ್ಕಾರದ ಭರವಸೆಯಂತೆ ನಾವು ಬೆಳೆ ಬೆಳೆಯಲು ಪ್ರಾರಂಭಿಸಿದ್ದೆವು. ಆದರೆ ಸರ್ಕಾರ ತಮಿಳುನಾಡಿಗೆ ನೀರು ಕೊಟ್ಟಿತೇ ವಿನಃ ನಮಗೆ ಕೊಡಲಿಲ್ಲ. ಹೀಗಾಗಿ ಭತ್ತ ಬರದಿದ್ದರೂ ಪರವಾಗಿಲ್ಲ, ಜಾನುವಾರಿಗೆ ಮೇವು ಸಿಗಲಿ ಎಂಬ ಪರಿಸ್ಥಿತಿಗೆ ನಾವು ಬಂದಿದ್ದೇವೆ. ಕುಟುಂಬಸ್ಥರು ಸಾಲ ಮಾಡಿ ಟ್ಯಾಂಕರ್​ ಮೂಲಕ ಎಷ್ಟು ನೀರು ಪೂರೈಸುತ್ತೀರಿ ಎಂದು ಕೇಳುತ್ತಿದ್ದಾರೆ. ನಿಜಕ್ಕೂ ನಮ್ಮ ಸ್ಥಿತಿ ಚಿಂತಾಜನಕವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಮಂತ್ರಿಗಳು ಕ್ರಮ ತೆಗೆದುಕೊಂಡು ನೆರವಿಗೆ ಧಾವಿಸಬೇಕು. ಸರ್ಕಾರ ಪರಿಹಾರ ನೀಡಬೇಕು" ಎಂದು ರೈತರು ಆಗ್ರಹಿಸಿದ್ದಾರೆ.

ಬೆಳೆ ಉಳಿಸಿಕೊಳ್ಳಲು ಬಿಂದಿಗೆ ಹಿಡಿದ ರೈತ:ಇತ್ತೀಚೆಗೆ ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ಯರೇಹಂಚಿನಾಳ ಗ್ರಾಮದ ರೈತ ಬೆಳೆ ಉಳಿಸಿಕೊಳ್ಳಲು ಬಿಂದಿಗೆ ಹಿಡಿದು ನೀರುಣಿಸಿದ್ದರು. ಯರೇಹಂಚಿನಾಳ ಗ್ರಾಮದ ಬಸವರಡ್ಡೆಪ್ಪ ಹನಸಿ ಎಂಬವರು ತನ್ನ ಎರಡು ಎಕರೆ ಜಮೀನಿನಲ್ಲಿ ಮೆಣಿಸಿನಕಾಯಿ ಬೆಳೆದಿದ್ದರು. ಸಕಾಲಕ್ಕೆ ಮಳೆ ಬಾರದೇ ಬೆಳೆ ಒಣಗಲಾರಂಭಿಸಿವೆ. ಇದನ್ನು ಕಂಡು ಹೊಟ್ಟೆಪಾಡಿಗೆ ಅಳಿದುಳಿದ ಬೆಳೆಯನ್ನಾದರೂ ಉಳಿಸಿಕೊಳ್ಳೋಣ ಎಂದು ಪ್ರತಿದಿನ ಕೆರೆಯಿಂದ ಬಿಂದಿಗೆಯಲ್ಲಿ ನೀರು ಹೊತ್ತು ತಂದು ನೀರುಣಿಸುತ್ತಿದ್ದಾರೆ.

ಇದನ್ನೂ ಓದಿ:ಕೊಪ್ಪಳ: ಈರುಳ್ಳಿ ಬೆಲೆ ಹೆಚ್ಚಾದರೂ ಬೆಳೆಗಾರರಲ್ಲಿ ಕಾಣದ ಸಂತಸ

Last Updated : Nov 9, 2023, 2:29 PM IST

ABOUT THE AUTHOR

...view details