ಕತ್ತೆಗಳ ಮೆರವಣಿಗೆ ಮಾಡಿ ಮಂಡ್ಯ ರೈತರ ಆಕ್ರೋಶ ಮಂಡ್ಯ: ಕೆಆರ್ಎಸ್ ಜಲಾಶಯದಿಂದ ಮತ್ತೆ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಮಂಡ್ಯದಲ್ಲಿ ರೈತರು ಅರೆಬೆತ್ತಲೆಯಾಗಿ ಕತ್ತೆ ಮೆರವಣಿಗೆ ನಡೆಸಿದರು. ನಗರದ ಸಂಜಯ್ ವೃತ್ತದಲ್ಲಿ ಕತ್ತೆಗಳನ್ನು ಹಿಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಧಿಕ್ಕಾರ ಕೂಗಿದ ರೈತರು ಕೆಆರ್ಎಸ್ನಿಂದ ತಮಿಳುನಾಡಿಗೆ ನೀರು ಬಿಡುವ ಮೂಲಕ ರೈತರ ಜೀವನಕ್ಕೆ ಕಂಟಕವಾಗಿದ್ದಾರೆ ಎಂದು ಕಿಡಿಕಾರಿದರು.
ರೈತರ ಪಾಲಿಗೆ ಮಂಡ್ಯ ಜಿಲ್ಲೆಯ ಶಾಸಕರು, ಸಂಸದರು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ನೀರು ಬಿಡುತ್ತಿದ್ದರೂ ಬಾಯಿ ಮುಚ್ಚಿಕೊಂಡಿದ್ದು, ತಮ್ಮ ಪಕ್ಷದ ಸರ್ಕಾರದ ಬೆಂಬಲಕ್ಕೆ ನಿಲ್ಲುವ ಮೂಲಕ ರೈತರಿಗೆ ದ್ರೋಹ ಮಾಡಿದ್ದಾರೆಂದು ಆರೋಪಿಸಿದರು. ಕೆಆರ್ಎಸ್ನಿಂದ 5,000ಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು 3000 ಕ್ಯೂಸೆಕ್ ನೀರು ಹರಿದು ಹೋಗುತ್ತಿದೆ ಎಂದು ಸುಳ್ಳು ಹೇಳಿದ್ದಾರೆ. ನಿರಂತರವಾಗಿ ನೀರು ಹರಿಸಿದ ಪರಿಣಾಮ ಜಲಾಶಯದಲ್ಲಿ ನೀರು ಬರಿದಾಗಿದೆ. ಮತ್ತೆ 15 ದಿನ ನೀರು ಬಿಟ್ಟರೆ ಇಲ್ಲಿನ ರೈತರ ಗತಿಯೇನು, ಕುಡಿಯಲು ನೀರು ಸಿಗುವುದೇ? ಎಂದು ಆತಂಕ ವ್ಯಕ್ತಪಡಿಸಿದರು.
ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕಕ್ಕೆ ನಿರಂತರ ಅನ್ಯಾಯ ಮಾಡುತ್ತಿದೆ. ಜಲಾಶಯಗಳಲ್ಲಿ ನೀರಿನ ಸಂಗ್ರಹದ ಬಗ್ಗೆ ಖುದ್ದಾಗಿ ಭೇಟಿ ನೀಡಿ ಅರಿಯದೆ ನೀರು ಬಿಡಿ ಎಂದು ಆದೇಶ ಮಾಡುತ್ತಿದೆ. ಕಳೆದೊಂದು ತಿಂಗಳಿಂದ ರೈತರು ಹೋರಾಟ ಮಾಡುತ್ತಿದ್ದರೂ ಕೇಂದ್ರ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಈ ಸಂಬಂಧ ಕೂಡಲೇ ಮಧ್ಯ ಪ್ರವೇಶಿಸಿ ಕರ್ನಾಟಕಕ್ಕೆ ನ್ಯಾಯ ದೊರಕಿಸಿಕೊಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಚಂದ್ರಶೇಖರ್ ಶಿವಳ್ಳಿ, ಸುರೇಶ ಗೋಪಾಲ ಪುರ, ನಾಗರಾಜು ಚಿಕ್ಕ ಮಂಡ್ಯ, ದಿನೇಶ್, ಜವರೇಗೌಡ, ನಾಗರಾಜು ಗಾಣದಾಳು, ವಿಜಯಕುಮಾರ್, ಹೊಳಲು ಶಿವರಾಂ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಮಂಡ್ಯ ವಿವಿಧೆಡೆ ಪ್ರತಿಭಟನೆ:ಮತ್ತೊಂದೆಡೆ, ಶ್ರೀರಂಗಪಟ್ಟಣದಲ್ಲಿ ರೈತರು ಹೆದ್ದಾರಿ ತಡೆದು ಪ್ರತಿಭಟಿಸಿದರು, ಭೂಮಿತಾಯಿ ಹೋರಾಟ ಸಮಿತಿ ಗುಳೆ ಹೊರಡುವ ಅಣಕು ಪ್ರದರ್ಶನ ನಡೆಸಿ ವಿಭಿನ್ನವಾಗಿ ಪ್ರತಿಭಟಿಸಿದರು. ಇನ್ನು ರೈತ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಧರಣಿ ಮುಂದುವರೆಸಿದ್ದು, ಧರಣಿಗೆ ಜೆಡಿಎಸ್ ನಾಯಕರು ಕೂಡ ಸಾಥ್ ನೀಡಿದರು. ಧರಣಿಯಲ್ಲಿ ಮಾಜಿ ಸಚಿವ ಸಿ ಎಸ್ ಪುಟ್ಟರಾಜು, ಮಾಜಿ ಶಾಸಕರಾದ ಸುರೇಶ್ ಗೌಡ, ಅನ್ನದಾನಿ ಸೇರಿದಂತೆ ಅನೇಕರು ಪಾಲ್ಗೊಂಡರು. ಕತ್ತಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು. ನಂತರ ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸುಪ್ರೀಂ ಕೋರ್ಟ್ನಲ್ಲಿ ಕೇಸ್ ಫೈಲ್ - ಚಲುವರಾಯಸ್ವಾಮಿ:ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ, ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುತ್ತಿದ್ದೇನೆ. ಸಂಜೆ ಸಿಎಂ, ಡಿಸಿಎಂ, ನಾವು ದೆಹಲಿಗೆ ಹೋಗುತ್ತಿದ್ದೇವೆ. ಪ್ರಧಾನಿ ಮತ್ತು ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡುತ್ತೇವೆ. ನಾಳೆ ದೆಹಲಿಯಲ್ಲಿ ಸಂಸದರ ಜೊತೆ ಸಭೆ ಮಾಡುತ್ತೇವೆ. ಸುಪ್ರೀಂ ಕೋರ್ಟ್ನಲ್ಲಿ ಕೇಸ್ ಫೈಲ್ ಮಾಡುತ್ತೇವೆ. ರೈತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ಹೆಚ್ಚು ಚರ್ಚೆ ಮಾಡಲು ಆಗುವುದಿಲ್ಲ. ಐದು ಸಾವಿರ ಕ್ಯೂಸೆಕ್ ಕೇಳಿದ್ದಾರೆ. ಸಿಪೇಜ್ ವಾಟರ್ ಹೋಗುತ್ತಿದೆ. ಸುಪ್ರೀಂ ಮುಂದೆ ಗಂಭೀರವಾಗಿ ವಾದ ಮಂಡನೆ ಮಾಡುತ್ತೇವೆ. ಪ್ರಧಾನಿ ಭೇಟಿಗೆ ಪತ್ರ ಬರೆದಿದ್ದೇವೆ. ನಮಗೆ ರೈತರಪರ ಕೆಲಸ ಮಾಡಲು ಬಿಡಿ. ನಾವು ರೈತರಪರ ಇದ್ದೇವೆ ಎಂದು ಹೇಳಿದರು.
ಇದನ್ನೂ ಓದಿ:ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದರಿಂದ ನನಗೇನೂ ಲಾಭವಿಲ್ಲ: ಡಿಕೆಶಿಗೆ ಬೊಮ್ಮಾಯಿ ತಿರುಗೇಟು