ಮಂಡ್ಯ:ಸಕ್ಕರೆ ನಾಡು ಮಂಡ್ಯದಲ್ಲಿ ಕೊರೊನಾ ರಣಕೇಕೆ ಹಾಕಿದ್ದು, ಪ್ರತಿ ನಿತ್ಯ ಸಾವಿರಕ್ಕಿಂತ ಹೆಚ್ಚು ಮಂದಿಗೆ ಸೋಂಕು ವಕ್ಕರಿಸುತ್ತಿದೆ. ಇದರಿಂದ ಆಸ್ಪತ್ರೆಗಳು ತುಂಬಿ ತುಳುಕುತ್ತಿದ್ದು, ಹೊಸ ರೋಗಿಗಳಿಗೆ ಬೆಡ್ ಸಿಗದ ದುಃಸ್ಥಿತಿ ನಿರ್ಮಾಣವಾಗಿದೆ.
ಓದಿ: ಗಡಿಯಲ್ಲಿ ಕಟ್ಟೆಚ್ಚರ ವಹಿಸಿದ ಕರ್ನಾಟಕ - ಮಹಾರಾಷ್ಟ್ರ ಪೊಲೀಸರು
ಉಸಿರಾಟ ಸಮಸ್ಯೆಯಿಂದ ಬಳಲುವ ಸೋಂಕಿತರು ಆಸ್ಪತ್ರೆ ಮುಂಭಾಗ ನರಳಾಡುತ್ತಿದ್ದಾರೆ. ಮತ್ತೊಂದೆಡೆ ಸರ್ಕಾರಿ ವೈದ್ಯನೊಬ್ಬ ಕೊರೊನಾ ಸಂಕಷ್ಟದಲ್ಲಿ ಕೆಲಸಕ್ಕೆ ಗೈರಾಗಿ ಕಳ್ಳಾಟ ಆಡುತ್ತಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯದಲ್ಲಿ ಕೊರೊನಾ ರಣಕೇಕೆ ಮತ್ತಷ್ಟು ಹೆಚ್ಚಾಗಿದೆ. ನಿತ್ಯ ಸಾವಿರ ಕೇಸ್ ಗಳು ಬರುತ್ತಿರುವುದರಿಂದ ಜಿಲ್ಲೆಯ ಎಲ್ಲ ಆಸ್ಪತ್ರೆಗಳು ಸೋಂಕಿತರಿಂದ ತುಂಬಿ ತುಳುಕುತ್ತಿದ್ದು, ಎಲ್ಲೂ ಬೆಡ್ ಖಾಲಿ ಇಲ್ಲ. ಇದರಿಂದ ಹೊಸ ರೋಗಿಗಳಿಗೆ ಚಿಕಿತ್ಸೆ ನೀಡಲಾಗದ ದುಃಸ್ಥಿತಿ ನಿರ್ಮಾಣವಾಗಿದ್ದು, ಉಸಿರಾಟದ ಸಮಸ್ಯೆ ಎದುರಿಸುತ್ತಿರುವ ರೋಗಿಗಳು ಮಿಮ್ಸ್ ಆಸ್ಪತ್ರೆ ಮುಂಭಾಗ ನರಳಾಡುತ್ತಿದ್ದಾರೆ.
ಮಂಡ್ಯದ ಮಿಮ್ಸ್ ನಲ್ಲಿ ಸಧ್ಯ 303 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿದ್ದು, ಸಂಪೂರ್ಣ ಭರ್ತಿಯಾಗಿವೆ. ಆದರೆ, ಉಸಿರಾಟದ ಸಮಸ್ಯೆ, ಎದೆಬಡಿತ, ಆಕ್ಸಿಜನ್ ಲೆವೆಲ್ ಕಡಿಮೆಯಾದ ನೂರಾರು ರೋಗಿಗಳು ನಿತ್ಯ ಚಿಕಿತ್ಸೆಗಾಗಿ ಆಸ್ಪತ್ರೆ ಬಳಿ ಬರುತ್ತಿದ್ದಾರೆ. ಎಲ್ಲ ಬೆಡ್ ಗಳು ಭರ್ತಿಯಾಗಿರುವುದರಿಂದ ತುರ್ತು ಚಿಕಿತ್ಸಾ ಘಟಕದ ಪಕ್ಕದಲ್ಲಿ ರೋಗಿಗಳಿಗೆ ಕುಳಿತಲ್ಲೇ ಆಕ್ಸಿಜನ್ ನೀಡಲಾಗುತ್ತಿದೆ. ಮೊದಲೇ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ಕುಳಿತುಕೊಳ್ಳಲಾರದೇ ನರಳಾಡಿಕೊಂಡು ಆಕ್ಸಿಜನ್ ತೆಗೆದುಕೊಳ್ಳುತ್ತಿದ್ದು, ದೃಶ್ಯ ನೋಡಿದರೆ ಎಂತಹವರ ಎದೆಯನ್ನೂ ಒಮ್ಮೆ ನಡುಗಿಸುವಂತೆ ಮಾಡುತ್ತಿದೆ.
ಓದಿ: ಬಿಟ್ಟಿ ಪ್ರಚಾರಕ್ಕಾಗಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಟೀಕೆ: ರೇಣುಕಾಚಾರ್ಯ ಕಿಡಿ
ಇನ್ನು ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಮಿಮ್ಸ್ ನಲ್ಲಿ 150 ಹೆಚ್ಚುವರಿ ಆಕ್ಸಿಜನ್ ಬೆಡ್ ಸಿದ್ಧಪಡಿಸಲಾಗಿದ್ದು, ಈ ಬೆಡ್ ಗಳನ್ನು ರೋಗಿಗಳ ಬಳಕೆಗೆ ಕೊಡಬೇಕಾದರೆ ನಿತ್ಯ 10 ಕೆಎಲ್ ಆಕ್ಸಿಜನ್ ಬೇಕು. ಸದ್ಯ ಮೂರು ದಿನಕ್ಕೆ 20 ಕೆಎಲ್ ಆಕ್ಸಿಜನ್ ಪೂರೈಕೆಯಾಗುತ್ತಿದೆ. ಇದರಿಂದ ಸಿದ್ಧಗೊಂಡಿರುವ ಹೆಚ್ಚುವರಿ ಬೆಡ್ ಗಳಿಗೆ ರೋಗಿಗಳನ್ನು ದಾಖಲಿಸಿಕೊಳ್ಳುತ್ತಿಲ್ಲ. ಇನ್ನು ಜನಪ್ರತಿನಿಧಿಗಳು ಆರೋಪ, ಪ್ರತ್ಯಾರೋಪ ಮಾಡಿಕೊಂಡು ರಾಜಕಾರಣ ಮಾಡುತ್ತಿದ್ದು, ಅಗತ್ಯ ಆಕ್ಸಿಜನ್ ಅನ್ನು ಜಿಲ್ಲೆಗೆ ತರುವಲ್ಲಿ ವಿಫಲರಾಗಿದ್ದಾರೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಂಡ್ಯ ತಾಲೂಕಿನ ಹೊಳಲು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ರವಿಕುಮಾರ್, ಕರ್ತವ್ಯಕ್ಕೆ ಹಾಜರಾಗದೇ ಕಳ್ಳಾಟವಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ನಾಲ್ಕು ದಿನದ ಹಿಂದೆ ಹಾಜರಾತಿ ಪುಸ್ತಕದಲ್ಲಿ ಮೇ 11 ರವರೆಗೆ ಸಹಿ ಮಾಡಿಹೋದ ವೈದ್ಯ, ಕೆಲಸಕ್ಕೆ ಬರುತ್ತಿಲ್ಲ. ನಿತ್ಯ ರೋಗಿಗಳು ಆಸ್ಪತ್ರೆ ಬಳಿ ಬರುತ್ತಿದ್ದು, ಗಂಟೆಗಟ್ಟಲೆ ಕಾದು ವಾಪಸ್ಸಾಗುತ್ತಿದ್ದಾರೆ. ಇಂದು ಕೆಲವು ಸಾರ್ವಜನಿಕರು ವೈದ್ಯ ರವಿಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಒಟ್ಟಾರೆ ಸೋಂಕಿತರು ಹೆಚ್ಚಾದಂತೆ ಆಸ್ಪತ್ರೆಗಳಲ್ಲಿ ಸಮಸ್ಯೆಗಳು ತಾಂಡವವಾಡುತ್ತಿವೆ. ಪರಿಣಾಮ ರೋಗಿಗಳು ನರಕಯಾತನೆ ಪಡುವಂತಾಗಿದೆ. ಇನ್ನೊಂದೆಡೆ ಸಂಕಷ್ಟದ ಸಮಯದಲ್ಲಿ ಜನರ ಪ್ರಾಣ ಉಳಿಸಬೇಕಿದ್ದ ವೈದ್ಯ ಕಳ್ಳಾಟವಾಡುತ್ತಿರುವುದು ದುರಂತವೇ ಸರಿ.