ಮಂಡ್ಯ: ಸಕ್ಕರೆ ನಾಡಿಗೆ ಮತ್ತೆ ಕೋವಿಡ್ ಆತಂಕ ಎದುರಾಗಿದೆ. ಮಂಡ್ಯದಲ್ಲಿ ಕೊರೊನಾ ಸ್ಫೋಟಗೊಂಡಿದ್ದು, ತಮಿಳುನಾಡಿಗೆ ಹೋಗಿ ಬಂದವರಲ್ಲಿ ಸೋಂಕು ಪತ್ತೆಯಾಗಿದೆ.
ತಮಿಳುನಾಡಿನ ಓಂಶಕ್ತಿಗೆ ಹೋಗಿದ್ದ ಶ್ರೀರಂಗಪಟ್ಟಣದ ಶೆಟ್ಟಿಹಳ್ಳಿ ಗ್ರಾಮದ ಭಕ್ತರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ದೇವಸ್ಥಾನಕ್ಕೆ ಹೋಗಿ ಬಂದಿರುವ 30ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಕಾಣಿಸಿಕೊಂಡಿದೆ.
ಸಕ್ಕರೆ ನಾಡಿನಲ್ಲಿ ಕೊರೊನಾ ಸ್ಫೋಟ ಶ್ರೀರಂಗಪಟ್ಟಣ ತಾಲೂಕಿನಿಂದ ಈ ದೇವಾಲಯಕ್ಕೆ ಕಳೆದ ವಾರ 6 ಬಸ್‌ಗಳಲ್ಲಿ ಭಕ್ತರು ತೆರಳಿದ್ದರು. ಈವರೆಗೆ ವಾಪಸಾದ 4 ಬಸ್‌ನಲ್ಲಿದ್ದ ಭಕ್ತರಲ್ಲಿ 30ಕ್ಕೂ ಹೆಚ್ಚು ಜನರಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ.
ಇದನ್ನೂ ಓದಿ:ಮಂಡ್ಯದಲ್ಲಿ ಬೂಟ್ ಪಾಲಿಶ್ ಮಾಡುವ ಮೂಲಕ ಅತಿಥಿ ಉಪನ್ಯಾಸಕರ ಪ್ರತಿಭಟನೆ
ಇಂದು ಅಥವಾ ನಾಳೆ ಮತ್ತೆರಡು ಬಸ್ಗಳು ಶ್ರೀರಂಗಪಟ್ಟಣಕ್ಕೆ ವಾಪಸಾಗುವ ಸಾಧ್ಯತೆ ಇದೆ. ಆರೋಗ್ಯ ಸಿಬ್ಬಂದಿ ತಮಿಳುನಾಡಿನಿಂದ ವಾಪಸಾದವರ ಟೆಸ್ಟ್ ಮಾಡುತ್ತಿದ್ದು, ಪಾಸಿಟಿವ್ ಬಂದವರನ್ನು ವಸತಿ ಶಾಲೆಗಳಲ್ಲಿ ಕ್ವಾರಂಟೈನ್ ಮಾಡುತ್ತಿದ್ದಾರೆ. ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕಿತರಿಗೂ ಪರೀಕ್ಷೆ ಮಾಡುತ್ತಿದ್ದಾರೆ.