ಮಂಡ್ಯ: ಮಳೆಗಾಲದಲ್ಲಿ ಸಂಚಾರ ಮಾಡಿದ್ರೆ ಕೊರೊನಾ ಸೋಂಕು ತಗುಲುವುದರಲ್ಲಿ ಅನುಮಾನವೇ ಇಲ್ಲ. ಆದ್ದರಿಂದ ಎಲ್ಲರೂ ಮುನ್ನೆಚ್ಚರಿಕೆವಹಿಸಿ ಎಂದು ಜಿಲ್ಲಾಧಿಕಾರಿ ಡಾ.ಎಂ ವಿ ವೆಂಕಟೇಶ್ ಹೇಳಿದರು.
ಮದ್ದೂರು ಪಟ್ಟಣ ಸೇರಿ ಕಂಟೇನ್ಮೆಂಟ್ ಝೋನ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮದ್ದೂರು ತಾಲೂಕಿಗೆ ಬೆಂಗಳೂರು ಸೇರಿ ಹೊರ ಜಿಲ್ಲೆಯಿಂದ ಹೆಚ್ಚಿನ ಜನರು ಸಂಚಾರ ಮಾಡುತ್ತಿದ್ದಾರೆ. ಕೆಲ ಸರ್ಕಾರಿ ನೌಕರರು ಬೆಂಗಳೂರು, ಮೈಸೂರು ಸೇರಿ ಹಲವು ಕಡೆಗಳಿಂದ ಸಂಚಾರ ಮಾಡುತ್ತಿದ್ದಾರೆ. ಈಗಾಗಲೇ ಹಲವರಿಗೆ ಕೊರೊನಾ ಸೋಂಕು ತಗುಲಿದೆ. ಇದರಿಂದ ಕಚೇರಿಗಳನ್ನು ಸೀಲ್ಡೌನ್ ಮಾಡಲಾಗುತ್ತಿದೆ.
ಸದ್ಯ ಮಳವಳ್ಳಿ ತಾಲೂಕಿನ ಹಲಗೂರು ಪೊಲೀಸ್ ಠಾಣೆಯನ್ನು ಸೀಲ್ಡೌನ್ ಮಾಡಲಾಗಿದೆ. ಇದರ ಜೊತೆಗೆ ಇತ್ತೀಚೆಗೆ ಮದ್ದೂರಿನ ಮೂರು ಪೊಲೀಸ್ ಠಾಣೆಗಳನ್ನು ಸೀಲ್ಡೌನ್ ಮಾಡಲಾಗಿತ್ತು. ಇವರಿಗೆ ಹೊರ ಜಿಲ್ಲೆಯ ಸೋಂಕಿತರದಿಂದ ಕೋವಿಡ್ ತಗುಲಿರುವುದು ಕಂಡು ಬಂದಿದೆ.
ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಮದ್ದೂರು ವ್ಯಾಪಾರಿಗಳು ಸ್ವಯಂ ಪ್ರೇರಣೆಯಿಂದ ಲಾಕ್‌ಡೌನ್ ಮಾಡಲು ನಿರ್ಧಾರ ಮಾಡಿದ್ದಾರೆ. ಮಧ್ಯಾಹ್ನದ ವೇಳೆಗೆ ವ್ಯಾಪಾರ, ವಹಿವಾಟು ನಿಲ್ಲಿಸಲು ವರ್ತಕರು ತೀರ್ಮಾನ ಮಾಡಿದ್ದಾರೆ. ನಾಗರಿಕರು ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ ಎಂದರು.
ಇಂದು 33 ಪ್ರಕರಣ :ಜಿಲ್ಲೆಯಲ್ಲಿ ಇಂದು 33 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಎಲ್ಲರಿಗೂ ಮಿಮ್ಸ್‌ನಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರು 473ಕ್ಕೆ ಏರಿಕೆಯಾಗಿದ್ದಾರೆ. ಈವರೆಗೆ 354 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಉಳಿದಂತೆ 119 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.