ಮಂಡ್ಯ : ಜಿಲ್ಲಾಧಿಕಾರಿ ತಾಲೂಕು ಕಚೇರಿಗಳಿಗೆ ಭೇಟಿ ನೀಡಿ ಶಾಕ್ ಕೊಟ್ಟಿದ್ದು, ಮತ್ತೊಂದು ಕಡೆ ಪೊಲೀಸ್ ವರಿಷ್ಠಾಧಿಕಾರಿ ಖುದ್ದು ರಸ್ತೆಗಿಳಿದು ಕಾನೂನು ಸುವ್ಯವಸ್ಥೆ ಕಾಪಾಡಲು ಮುಂದಾಗಿದ್ದಾರೆ. ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್ ಇಂದು ಮದ್ದೂರು ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿ ಅವರು ಕಚೇರಿಗೆ ಭೇಟಿ ನೀಡುತ್ತಿದಂತೆ ಹಲವಾರು ಸಮಸ್ಯೆಗಳು ಕಂಡು ಬಂದಿವೆ. ಜೊತೆಗೆ ಆನೇಕ ನೌಕರರು ಕಚೇರಿಯಲ್ಲೇ ಇರಲಿಲ್ಲ. ಈ ಸಂಬಂಧ ತಕ್ಷಣ ತಹಶೀಲ್ದಾರರಿಗೆ ನೋಟಿಸ್ ನೀಡುವಂತೆ ಸೂಚಿಸಿದರು. ನಂತರ ಎಡಿಸಿ ನಾಗರಾಜ್ ಜೊತೆ ತೆರಳಿ ಖಜಾನೆ ಶಾಖೆ, ನಾಡ ಕಚೇರಿ, ಆಧಾರ್ ಕೇಂದ್ರ, ಆಡಳಿತ ವಿಭಾಗಗಳನ್ನು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಕುಂದು ಕೊರತೆಗಳನ್ನ ಆದಷ್ಟು ಬೇಗ ಬಗೆ ಹರಿಸುವುದಾಗಿ ತಿಳಿಸಿದರು. ಭ್ರಷ್ಟಾಚಾರ ಕಂಡು ಬಂದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲು ಅಧಿಕಾರಗಳಿಗೆ ಸೂಚನೆ ಕೊಟ್ಟಿದ್ದಾರೆ.
ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಹೊಸ ಕಾರ್ಡ್ಗೆ ಅವಕಾಶ ಕೊಡದೇ ಇರುವುದರಿಂದ ಸರ್ಕಾರದ ಯೋಜನೆಗಳಿಂದ ಜನರು ವಂಚಿತರಾಗುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಡಾ. ಕುಮಾರ್ ಅವರು ಪ್ರತಿಕ್ರಿಯಿಸಿ, ಈಗ ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಮುಂದೆ ಅವಕಾಶ ಮಾಡಿಕೊಡಲಾಗುತ್ತದೆ. ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಕೊಟ್ಟಿದ್ದೇವೆ ಎಂದರು.
ಇದನ್ನೂ ಓದಿ :ಬೆಂಗಳೂರು- ಮೈಸೂರು ಹೆದ್ದಾರಿ ಪರಿಶೀಲಿಸಿದ ಎಡಿಜಿಪಿ ಅಲೋಕ್ ಕುಮಾರ್