ಮಂಡ್ಯ: ಸರ್ಕಾರಿ ಇಲಾಖೆಯಲ್ಲಿನ ಅಧಿಕಾರಿ, ಸಿಬ್ಬಂದಿಯ ಆಟಾಟೋಪಕ್ಕೆ ಕಡಿವಾಣ ಹಾಕಲು ಜಿಲ್ಲಾಧಿಕಾರಿ ಡಾ.ಕುಮಾರ ಮುಂದಾಗಿದ್ದಾರೆ. ಇಲಾಖೆಗಳಲ್ಲಿ ಶಿಸ್ತಿನಿಂದ ಇರುವುದರೊಂದಿಗೆ ಕಡ್ಡಾಯವಾಗಿ ನಿಯಮಗಳನ್ನು ಪಾಲಿಸುವಂತೆ ಖಡಕ್ ಸೂಚನೆ ಕೊಟ್ಟಿದ್ದಾರೆ. ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಅವಧಿಯಲ್ಲಿ ಕೆಲ ಅಧಿಕಾರಿ, ಸಿಬ್ಬಂದಿ ಸುಖಾಸುಮ್ಮನೆ ಹೊರಗೆ ತಿರುಗಾಡುವುದು ಹಾಗೂ ಟೀ, ಕಾಫಿ ಕುಡಿಯುವ ನೆಪದಲ್ಲಿ ಕಾಲಹರಣ ಮಾಡುವುದು, ಇಷ್ಟ ಬಂದಾಗ ಬರುವುದು, ಹೋಗುವುದು ಎಂಬೆಲ್ಲ ಆರೋಪ ಹಿಂದಿನಿಂದಲೂ ಇದೆ. ಆದರೆ ಇದುವರೆಗೂ ಇಂಥದ್ದಕ್ಕೆ ಕಡಿವಾಣ ಹಾಕುವ ಕೆಲಸವಾಗಿರಲಿಲ್ಲ. ಇದೀಗ ಜಿಲ್ಲಾಧಿಕಾರಿ ಬಿಸಿ ಮುಟ್ಟಿಸುವ ಕೆಲಸ ಮಾಡಿದ್ದಾರೆ.
ಸಮಯ ಪಾಲನೆ ಕಡ್ಡಾಯ:ಕಚೇರಿಯ ನಿಗದಿತ ಅವಧಿಯಲ್ಲಿ ಸಮಯಪ್ರಜ್ಞೆ ಪಾಲನೆ ಮಾಡುವುದು ಕಡ್ಡಾಯ. ಒಂದು ವೇಳೆ ಉಲ್ಲಂಘಿಸಿದರೆ ಲಿಖಿತ ರೂಪದಲ್ಲಿ ಎಚ್ಚರಿಕೆ ನೀಡುವ ಹೊಣೆಯನ್ನು ಇಲಾಖೆ ಮುಖ್ಯಸ್ಥರಿಗೆ ನೀಡಲಾಗಿದೆ. ಕರ್ತವ್ಯದ ವೇಳೆಯಲ್ಲಿ ಟೀ, ಕಾಫಿಗೆಂದು ಸಿಬ್ಬಂದಿ ವರ್ಗ ಕಚೇರಿಯಿಂದ ಹೊರಗಡೆ ಹೋಗದಂತೆಯೂ ನಿರ್ಬಂಧಿಸಲಾಗಿದೆ. ಪ್ರತಿ ಕಚೇರಿಯಲ್ಲಿಯೂ ಚಲನವಲನ ವಹಿ ನಿರ್ವಹಿಸಿ ಸಿಬ್ಬಂದ ವರ್ಗದ ಮೇಲೆ ನಿಗಾ ವಹಿಸುವಂತೆ ತಿಳಿಸಿದ್ದಾರೆ. ಸೂಚನೆ ಪಾಲನೆ ಮಾಡುವ ಸಂಬಂಧ ಜಿಲ್ಲಾಮಟ್ಟದ ಅಧಿಕಾರಿಗಳು, ಉಪವಿಭಾಗಾಧಿಕಾರಿ, ತಹಶೀಲ್ದಾರ್, ಕಚೇರಿ ಸಹಾಯಕರು ಹಾಗೂ ಶಾಖಾ ಮುಖ್ಯಸ್ಥರಿಗೆ ಆದೇಶ ನೀಡಲಾಗಿದೆ.
ಬಯೋಮೆಟ್ರಿಕ್ ಅಳವಡಿಕೆ: ಎಲ್ಲ ಕಚೇರಿಯಲ್ಲಿ ಬಯೋಮೆಟ್ರಿಕ್ ಹಾಜರಾತಿ ಪದ್ಧತಿಯನ್ನು ಅಳವಡಿಸಬೇಕು. ಕಚೇರಿಯ ಮುಖ್ಯಸ್ಥರು ಪ್ರತಿ ವಾರಕ್ಕೊಮ್ಮೆ ಹಾಜರಾತಿ ಪರಿಶೀಲನೆ ಮಾಡಬೇಕಿದೆ. ಶಾಖೆಗಳಿಗೂ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಬೇಕು. ಅಧಿಕಾರಿ, ಸಿಬ್ಬಂದಿ ಕರ್ತವ್ಯದ ಅವಧಿಯಲ್ಲಿ ಇಲಾಖೆಯಿಂದ ನೀಡಿರುವ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಬೇಕು. ಅಂತೆಯೇ ಕರ್ತವ್ಯ ನಿರ್ವಹಿಸುವ ಮೇಜಿನ ಮೇಲೆ ಅಧಿಕಾರಿ, ಸಿಬ್ಬಂದಿ ಹೆಸರು, ಪದನಾಮ ಸೂಚಿಸುವ ನಾಮಫಲಕ ಅಳವಡಿಸುವುದು ಕಡ್ಡಾಯಗೊಳಿಸಲಾಗಿದೆ.