ಮಂಡ್ಯ: ಕೊರೊನಾ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ದಿಢೀರ್ ರಸ್ತೆಗಿಳಿದ ಜಿಲ್ಲಾಧಿಕಾರಿ ಎಸ್. ಅಶ್ವತಿ ಮಾಸ್ಕ್ ಧರಿಸದೇ ಓಡಾಡುತ್ತಿದ್ದ ಸಾರ್ವಜನಿಕರಿಗೆ ದಂಡ ವಿಧಿಸಿದರು.
ನಗರಸಭೆ ಅಧಿಕಾರಿಗಳ ಜೊತೆಗೂಡಿ ನಗರದ ವಿ.ವಿ ರಸ್ತೆಯಲ್ಲಿರುವ ಅಂಗಡಿ ಮುಂಗಟ್ಟುಗಳಿಗೆ ದಿಢೀರ್ ಭೇಟಿ ನೀಡಿ ಮಾಸ್ಕ್ ಹಾಕದವರಿಗೆ ತಲಾ 500 ರೂ. ದಂಡ ವಿಧಿಸಿ ಬಿಸಿ ಮುಟ್ಟಿಸಿದರು. ವಿ.ವಿ.ರಸ್ತೆಯಲ್ಲೆಲ್ಲ ಸಂಚರಿಸಿದ ಜಿಲ್ಲಾಧಿಕಾರಿ ಎಲ್ಲ ಅಂಗಡಿಗಳು, ಹೋಟೆಲ್‌ಗಳಿಗೆ ತೆರಳಿ ಇಲ್ಲಿಗೆ ಬರುವ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಸ್ಯಾನಿಟೈಸರ್ ಬಳಸಿ ಸಾಮಾಜಿಕ ಅಂತರ ಕಾಪಾಡುವಂತೆ ಸೂಚನೆ ನೀಡಿದರು.
ಮಾಸ್ಕ್ ಹಾಕದವರಿಗೆ ದಂಡ ವಿಧಿಸಿದ ಮಂಡ್ಯ ಜಿಲ್ಲಾಧಿಕಾರಿ.. ಮಂಡ್ಯದಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಜಾಗೃತರಾಗಬೇಕು. ಕೊರೊನಾ ಇನ್ನೂ ನಮ್ಮನ್ನು ಬಿಟ್ಟು ಹೋಗಿಲ್ಲ. ಮಂಡ್ಯದಲ್ಲಿ ಒಂದೂ ಪ್ರಕರಣವಿಲ್ಲದಂತೆ ಝೀರೋ ಆಗುವವರೆಗೂ ಈ ದಂಡ ಹಾಕುವ ಪ್ರಕ್ರಿಯೆ ಮುಂದುವರೆಯುವುದು ಎಂದರು.
ನಿಮ್ಮ ಆರೋಗ್ಯ ಮತ್ತು ನಿಮ್ಮ ಕುಟುಂಬದವರ ಆರೋಗ್ಯದ ಹಿತದೃಷ್ಟಿಯಿಂದ ಕೊರೊನಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಮ್ಮ ಬೇಜವಾಬ್ದಾರಿತನದಿಂದ ಕುಟುಂಬದವರಿಗೆ ಸೋಂಕು ತಗುಲಿದರೆ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಪ್ರತಿಯೊಬ್ಬರೂ ಇದನ್ನು ಅರ್ಥ ಮಾಡಿಕೊಂಡು ನಡೆಯಬೇಕು ಎಂದು ಸಲಹೆ ನೀಡಿದರು.
ಗ್ರಾಮೀಣ ಪ್ರದೇಶದಿಂದ ಬಂದಿದ್ದ ಕೆಲ ಮಹಿಳೆಯರು ಮುಖಕ್ಕೆ ಕರ್ಚೀಫ್, ಸೆರಗು ಮುಚ್ಚಿಕೊಂಡಿದ್ದನ್ನು ಗಮನಿಸಿದ ಜಿಲ್ಲಾಧಿಕಾರಿ ಎಸ್.ಅಶ್ವತಿ ಮಾಸ್ಕ್ ನೀಡಿ ಅರಿವು ಮೂಡಿಸಿದರು.