ಮಂಡ್ಯ :ಇನ್ಸ್‌ಟಾಗ್ರಾಮ್‌ನಲ್ಲಿ ಯಾವುದೇ ವೈರಲ್ ರೀಲ್ ಬಂದರೂ ತನ್ನದೊಂದು ರೀಲ್ಸ್ ಮಾಡಿ ಪೋಸ್ಟ್ ಮಾಡುತ್ತಿದ್ದ ಪತ್ನಿಯ ಹವ್ಯಾಸದಿಂದ ಕೋಪಗೊಂಡ ಪತಿ ಆಕೆಯನ್ನು ಕೊಲೆಗೈದು ಶವವನ್ನು ಕಾವೇರಿ ನದಿಗೆಸೆದಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಮಂಡ್ಯಕೊಪ್ಪಲುವಿನಲ್ಲಿ ನಡೆದಿದೆ.
ಇನ್ಸ್‌ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡುತ್ತಿದ್ದ ಸುಂದರಿಗೆ ಮೊಬೈಲ್ ಗೀಳೇ ಜೀವಕ್ಕೆ ಆಪತ್ತು ತಂದಿದೆ. ರೀಲ್ಸ್ ಮಾಡುತ್ತಿದ್ದಾಗ, ಆಕೆ ತನ್ನ ಸ್ನೇಹಿತರೊಂದಿಗೆ ಚಾಟಿಂಗ್ ಮಾಡುವ ಅಭ್ಯಾಸ ಇರಿಸಿಕೊಂಡಿದ್ದಳು ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ದೊರೆತಿದೆ.
ಸಂಪೂರ್ಣ ವಿವರ: 26 ವರ್ಷದ ಪೂಜಾ ಕೊಲೆಯಾಗಿರುವ ಯುವತಿ. ಶ್ರೀನಾಥ್ (33) ಆರೋಪಿ ಪತಿ. ಪ್ರೀತಿಸಿ ಮದುವೆಯಾದ ಪತ್ನಿಯನ್ನು ವೇಲ್‌ನಿಂದ ಕುತ್ತಿಗೆ ಬಿಗಿದು ಕೊಂದಿದ್ದಾನೆ. ಅತಿಯಾದ ಮೊಬೈಲ್ ಗೀಳು ಹಾಗೂ ಆಕೆಯ ರೀಲ್ಸ್ ಅಭ್ಯಾಸ ನೋಡಿ ಆರೋಪಿ ಅನುಮಾನ ವ್ಯಕ್ತಪಡಿಸುತ್ತಿದ್ದ ಎಂದು ತಿಳಿದುಬಂದಿದೆ.
ಕೊಲೆ ಮಾಡಿದ 3 ದಿನಗಳ ಬಳಿಕ ಆರೋಪಿ 102 ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. 9 ವರ್ಷದ ಹಿಂದೆ ಪೂಜಾ ಹಾಗೂ ಶ್ರೀನಾಥ್ ಪ್ರೀತಿಸಿ ಮದುವೆಯಾಗಿದ್ದರು. ಆರಂಭದ ಕೆಲ ವರ್ಷಗಳ ಕಾಲ ಅನ್ಯೋನ್ಯವಾಗಿ ಬದುಕುತ್ತಿದ್ದ ದಂಪತಿಗೆ ಹೆಣ್ಣು ಮಗುವಿದೆ. ಆದರೆ, ಪೂಜಾಗೆ ಮೊದಲಿನಿಂದಲೂ ಟಿಕ್‌ಟಾಕ್ ಹಾಗೂ ಇನ್ಸ್‌ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡುವ ಅಭ್ಯಾಸವಿತ್ತಂತೆ. ರೀಲ್ಸ್ ಮಾಡುವ ಜೊತೆಗೆ ಅತಿಯಾಗಿ ಫೋನ್ ಬಳಕೆ ಮಾಡುತ್ತಿದ್ದರು. ಈ ವಿಚಾರವಾಗಿ ಗಂಡ-ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ನೇಣಿಗೆ ಶರಣಾದ ಯುವತಿ:ಇನ್ನೊಂದೆಡೆ, ಅತಿಯಾಗಿ ಮೊಬೈಲ್ ಬಳಸುತ್ತಾಳೆಂದು ಸಹೋದರ ತನ್ನ ಮೊಬೈಲ್ಗೆ ಪಾಸ್ವರ್ಡ್ ಇಟ್ಟಿದ್ದಕ್ಕೆ ಅಕ್ಕ ಆತ್ಮಹತ್ಯೆ ಮಾಡಿಕೊಂಡ ಘಟನೆ ದೊಡ್ಡಬಳ್ಳಾಪುರ ನಗರದ ಗಾಣಿಗರಪೇಟೆಯಲ್ಲಿ (ನವೆಂಬರ್ 12-2022) ನಡೆದಿತ್ತು.
ಪಿಯುಸಿ ಓದುತ್ತಿದ್ದ ರುಚಿತಾ (19) ಎಂಬವರು ನೇಣಿಗೆ ಶರಣಾದವರು. ರುಚಿತಾ ಮನೆಯಲ್ಲಿ ಅತಿ ಹೆಚ್ಚು ಮೊಬೈಲ್ನಲ್ಲಿ ಮಾತನಾಡುತ್ತಿದ್ದರಂತೆ. ಮೊಬೈಲ್ ಬಳಕೆಯಿಂದ ದೂರ ಮಾಡುವ ಉದ್ದೇಶದಿಂದ ಸಹೋದರ ಪಾಸ್ವರ್ಡ್ ಸೆಟ್ ಮಾಡಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ಆಗಿತ್ತು. ಘಟನೆಯಿಂದ ಬೇಸತ್ತ ಯುವತಿ ಮನೆಯ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಅಕ್ಕನ ಮೊಬೈಲ್ ಗೀಳು ಕಂಡು ಪಾಸ್ವರ್ಡ್ ಇಟ್ಟ ತಮ್ಮ: ದೊಡ್ಡಬಳ್ಳಾಪುರದಲ್ಲಿ ನೇಣಿಗೆ ಶರಣಾದ ಯುವತಿ