ಮಂಡ್ಯ: ಕೋವಿಡ್ ಸೋಂಕು ಹರಡುವ ಭೀತಿಗೆ, ಮೃತರ ಅಂತ್ಯಕ್ರಿಯೆ ನೆರವೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಸೋಂಕಿನ ಭಯದಲ್ಲಿ ಸಂಬಂಧಗಳಿಗೂ ಬೆಲೆ ಇಲ್ಲ ಅನ್ನೋದು ಹಲವೆಡೆ ಸಾಬೀತಾಗಿದೆ. ಇಂತಹ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಸಕ್ಕರೆ ನಾಡಿನ ದಂಪತಿ ಕೋವಿಡ್ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನೆರವೇರಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
ಮಾನವೀಯ ಕೆಲಸಕ್ಕೆ ಮುಂದಾದ ಮಂಡ್ಯದ ದಂಪತಿ ಓದಿ: 'ಕೊರೊನಾ ಸೋಂಕಿತರ ಅಂತ್ಯ ಸಂಸ್ಕಾರವನ್ನು ಗೌರವದಿಂದ ನೆರವೇರಿಸಿ': ಸಿಎಂ ಬಿಎಸ್ವೈ ತಾಕೀತು..!
ಕೆಲವು ಜಿಲ್ಲೆಗಳಲ್ಲಿ ಕೋವಿಡ್ ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಸಾವಿರಾರು ರೂಪಾಯಿ ಹಣ ಪಡೆದ ಸಾಕಷ್ಟು ಉದಾಹರಣೆಗಳಿವೆ. ಅಷ್ಟೇ ಏಕೆ ಅತ್ಯಂತ ಅಮಾನವೀಯವಾಗಿ ಅಂತ್ಯ ಸಂಸ್ಕಾರ ನೆರವೇರಿಸಿದ ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಇಂತಹ ಹಲವು ಘಟನೆಗಳನ್ನು ನೋಡಿದ್ದ ಜಿಲ್ಲೆಯ ಭಾರತೀಪುರ ಪಟ್ಟಣದ ಈ ದಂಪತಿ 9 ತಿಂಗಳ ಮಗುವನ್ನ ತಮ್ಮ ತಂದೆ-ತಾಯಿ ಬಳಿ ಬಿಟ್ಟು ಉಚಿತವಾಗಿ ಮತ್ತು ಶಾಸ್ತ್ರೋಕ್ತವಾಗಿ ಮೃತರ ಶವಸಂಸ್ಕಾರ ನಡೆಸುತ್ತಿದ್ದಾರೆ.
ಮದ್ದೂರು ಪುರಸಭೆ ಸದಸ್ಯೆ ಪ್ರಿಯಾಂಕಾ ಅಪ್ಪುಗೌಡ ಹಾಗೂ ಅವರ ಪತಿ, ಸಮಾಜ ಸೇವಕ ಅಪ್ಪು ಪಿ.ಗೌಡ ತಾವೇ ಮುಂದೆ ನಿಂತು ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಕಳೆದ ವರ್ಷ ಲಾಕ್ಡೌನ್ ಸಂದರ್ಭದಲ್ಲೂ ಈ ದಂಪತಿ ಒಂದೂವರೆ ಸಾವಿರಕ್ಕೂ ಹೆಚ್ಚು ಜನರಿಗೆ ಊಟ ವಿತರಿಸಿದ್ದರು.
2020ರ ಆರಂಭದಲ್ಲಿ ಕೋವಿಡ್ನಿಂದ ಮೃತಪಟ್ಟವರನ್ನು ರಾಜ್ಯದ ವಿವಿಧೆಡೆ ಹೀನಾಯವಾಗಿ ಅಂತ್ಯಸಂಸ್ಕಾರ ಮಾಡುತ್ತಿದ್ದುದನ್ನು ನೋಡಿದ್ದೆವು. ಯಾವುದೇ ವ್ಯಕ್ತಿ ಸತ್ತಾಗ ಅವರ ಸಂಸ್ಕಾರವಾದರು ಗೌರವಯುತವಾಗಿ ನಡೆಯಬೇಕೆಂದು ನಿರ್ಧರಿಸಿದೆವು. ಹೀಗಾಗಿ ಇಲ್ಲಿವರಗೂ 16 ಸೋಂಕಿತರ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದೇವೆ. ಇದರ ಜತೆ ಪ್ರತಿ ಬುಧವಾರ ತಾಲೂಕಿನಲ್ಲಿರುವ ಕೊರೊನಾ ಸೋಂಕಿತರಿಗೆ ಬಿರಿಯಾನಿ ಊಟ ನೀಡುತ್ತಿದ್ದೇವೆ. ರೋಗಿಗಳಿಗೆ ಕೋವಿಡ್ ಸೋಂಕು ನಿಯಂತ್ರಣ ಮಾತ್ರೆಗಳನ್ನು ಹಂಚುತ್ತಿರುವುದಾಗಿ ಈ ದಂಪತಿ ತಿಳಿಸಿದ್ದಾರೆ.
ಇವರ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಅಲ್ಲದೆ, ಈ ಸೇವೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಒಟ್ಟಿನಲ್ಲಿ ಕೋವಿಡ್ನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೂ ಹಣ ಸುಲಿಗೆ ಮಾಡುತ್ತಿರುವ ಈ ಸಂದರ್ಭದಲ್ಲಿ, ಈ ದಂಪತಿ ಸ್ವಯಂ ಪ್ರೇರಣೆಯಿಂದ ಉಚಿತವಾಗಿ ಅಂತ್ಯ ಸಂಸ್ಕಾರ ಮಾಡುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ.