ಮಂಡ್ಯ:ಸಕ್ಕರೆ ನಾಡಿನ ಚುನಾವಣಾ ಚಿತ್ರಣ ಈ ಬಾರಿ ಸಂಪೂರ್ಣ ಬದಲಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಸ್ವತಃ ತಮ್ಮ ಪುತ್ರ, ಚಿತ್ರನಟ ನಿಖಿಲ್ ಅವರನ್ನೇ ಈ ಕ್ಷೇತ್ರದಿಂದ ಕಣಕ್ಕಿಳಿಸಿದ್ದರು. ಇನ್ನೊಂದೆಡೆ ಮಂಡ್ಯದ ಗಂಡು ಅಂಬರೀಶ್ ಪತ್ನಿ ಸುಮಲತಾ ಕಾಂಗ್ರೆಸ್‌ನಿಂದ ಟಿಕೆಟ್ ದೊರೆಯದೆ ಪಕ್ಷೇತರರಾಗಿ ಇದೇ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಡಿ ಇಟ್ಟರು. ಈ ಇಬ್ಬರೂ ಜಿಲ್ಲೆಯಾದ್ಯಂತ ನಡೆಸಿದ ಮತಬೇಟೆಯ ಅಬ್ಬರ, ಆರೋಪ ಪ್ರತ್ಯಾರೋಪಗಳನ್ನೆಲ್ಲಾ ಇಡೀ ರಾಜ್ಯವೇ ಬೆರಗುಗಣ್ಣಿನಿಂದ ನೋಡಿದೆ. ಇವತ್ತು ಇಬ್ಬರ ರಾಜಕೀಯ ಹಣೆಬರಹವನ್ನು ಮಂಡ್ಯದ ಮತದಾರರು ಬರೆಯಲಿದ್ದಾರೆ.
ಅಭ್ಯರ್ಥಿಗಳ ಚಿತ್ರಣ:
ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ 31 ರ ಹರೆಯದ ನಿಖಿಲ್ ಕುಮಾರಸ್ವಾಮಿ ಇದೇ ಮೊದಲ ಬಾರಿಗೆ ರಾಜಕೀಯಕ್ಕೆ ಧುಮುಕಿದ್ದಾರೆ. ಪ್ರಭಾವಿ ದೇವೇಗೌಡರ ಕುಟುಂಬ, ಕಾಂಗ್ರೆಸ್ ಘಟಾನುಘಟಿ ನಾಯಕರುಗಳ ಬೆಂಬಲ ಹಾಗೂ ಪಕ್ಷದ ಬೆಂಬಲದ ಹಿನ್ನೆಲೆಯಲ್ಲಿ ಅವರು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಇನ್ನೊಂದೆಡೆ, ಸುಮಲತಾ ಅಂಬರೀಶ್ ಅವರಿಗೆ 'ಅಂಬಿ' ಹೆಸರೇ ನಾಮಬಲ. ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿರುವ ಸುಮಲತಾ ಪರ ಸ್ಯಾಂಡಲ್‌ವುಡ್‌ನ ಖ್ಯಾತ ನಟರಾದ ಯಶ್, ದರ್ಶನ್, ದೊಡ್ಡಣ್ಣ, ರಾಕ್‌ಲೈನ್ ವೆಂಕಟೇಶ್ ಬೆಂಬಲ ಸೂಚಿಸಿ ಅಬ್ಬರದ ಮತಪ್ರಚಾರ ನಡೆಸಿದ್ದಾರೆ.
ಕಣದಲ್ಲಿ 20 ಮಂದಿ ಪಕ್ಷೇತರರು:
ಇನ್ನು ಮಂಡ್ಯದಿಂದ ಲೋಕಸಭೆ ಪ್ರವೇಶ ಬಯಸಿ 20 ಮಂದಿ ಅಭ್ಯರ್ಥಿಗಳು ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಇವರಲ್ಲಿ ನಾಲ್ವರು ಸುಮಲತಾ ಎಂಬ ಹೆಸರಿನ ಅಭ್ಯರ್ಥಿಗಳಿರುವುದು ವಿಶೇಷವಾಗಿದೆ.