ಮಂಡ್ಯ:ಸರ್ಕಾರದಿಂದ ರೈತರಿಗೆ ಸಬ್ಸಿಡಿ ದರದಲ್ಲಿ ವಿತರಿಸುತ್ತಿದ್ದ ರಸಗೊಬ್ಬರವನ್ನು ಅಕ್ರಮವಾಗಿ ಶೇಖರಣೆ ಮಾಡಿ, ಬೇರೆಯವರಿಗೆ ಮಾರಟ ಮಾಡುತ್ತಿದ್ದ ದಾಸ್ತಾನಿನ ಮೇಲೆ ಕೃಷಿ ಅಧಿಕಾರಿಗಳು ಇಂದು ದಾಳಿ ನಡೆಸಿ 1000ಕ್ಕೂ ಹೆಚ್ಚು ರಸಗೊಬ್ಬರ ಚೀಲಗಳನ್ನು ವಶಪಡಿಸಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಕೆಲ ದಿನಗಳ ಹಿಂದೆ ಜಿಲ್ಲೆಯಲ್ಲಿ ನಕಲಿ ರಸಗೊಬ್ಬರ ಜಾಲವನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದರು. ನಕಲಿ ಗೊಬ್ಬರದ ಮೂಲಕ ರೈತರಿಗೆ ವಂಚನೆ ಮಾಡುತ್ತಿದ್ದ ದಂಧೆಗೆ ಕೃಷಿ ಅಧಿಕಾರಿಗಳು ಕಡಿವಾಣ ಕೂಡಾ ಹಾಕಿದ್ದರು. ಸರ್ಕಾರ ರೈತರಿಗೆ ಸಬ್ಸಿಡಿಯಲ್ಲಿ ರಸಗೊಬ್ಬರ ನೀಡುತ್ತಿದೆ. ರೈತರಿಗೆ ಸಮರ್ಪಕವಾಗಿ ಸಿಗಬೇಕಾದ ರಸಗೊಬ್ಬರ ಅಕ್ರಮವಾಗಿ ದಾಸ್ತಾನಿನಲ್ಲಿ ಸಂಗ್ರಹವಾಗಿ ಬೇರೆಡೆ ಮಾರಾಟ ಆಗುತ್ತಿದೆ. ಈ ಮೂಲಕ ಕೃತಕ ಅಭಾವ ಸೃಷ್ಟಿಸುವ ಯತ್ನಗಳೂ ನಡೆದಿವೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಚಿಣ್ಯ ಗ್ರಾಮದ ಡೈರಿ ರಮೇಶ್ ಎಂಬುವವರ ತೋಟದ ಮನೆ ಮೇಲೆ 10ಕ್ಕೂ ಹೆಚ್ಚು ಕೃಷಿ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ರಸಗೊಬ್ಬರ ಶೇಖರಣೆ ಮಾಡಿಟ್ಟಿದ್ದ ಸುಮಾರು 1200ಕ್ಕೂ ಹೆಚ್ಚು ಯೂರಿಯಾ ರಸಗೊಬ್ಬರದ ಚೀಲಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಆರೋಪಿ ರಮೇಶ್ ಮೇಲೆ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ:'ನ್ಯಾಯ ಬೇಕು ಮೋದಿ' ಪೋಸ್ಟರ್ ಅಭಿಯಾನದಲ್ಲಿ ಪ್ರಧಾನಿಗೆ 12 ಪ್ರಶ್ನೆ ಕೇಳಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ..