ಮಂಡ್ಯ : ಕಾಂಗ್ರೆಸ್ ಅಭ್ಯರ್ಥಿ ಗಾಣಿಗ ರವಿಕುಮಾರ್ ಇಂದು ನಾಮಪತ್ರ ಸಲ್ಲಿಕೆ ಮಾಡಿದರು. ಈ ಹಿನ್ನೆಲೆಯಲ್ಲಿ ಮಂಡ್ಯಕ್ಕೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಗರದ ಸಿಲ್ವರ್ ಜ್ಯುಬಿಲಿ ಪಾರ್ಕ್ನಲ್ಲಿ ನಡೆದ ಬೃಹತ್ ಸಭೆಯಲ್ಲಿ ಭಾಗವಹಿಸಿ ಕೈ ಅಭ್ಯರ್ಥಿ ಪರ ಮತಯಾಚನೆ ಮಾಡಿದರು. ಈ ಸಮಾರಂಭದಲ್ಲಿ ಡಿ.ಕೆ ಶಿವಕುಮಾರ್, ಜೆಡಿಎಸ್ ಮತ್ತು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಸ್ಥಳೀಯ ನಾಯಕರನ್ನು ಪಕ್ಷದ ಶಾಲು ಹಾಕಿ ಸ್ವಾಗತಿಸಿದರು.
ಬಳಿಕ ಮಾತನಾಡಿದ ಡಿಕೆ ಶಿವಕುಮಾರ್,ಕಾಂಗ್ರೆಸ್ ಶಕ್ತಿಯೆ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸವೇ ದೇಶದ ಇತಿಹಾಸ. ಕಳೆದ ಚುನಾವಣೆಯಲ್ಲಿ ಗಣಿಗ ರವಿಕುಮಾರ್ ಕಡಿಮೆ ಅಂತರದಲ್ಲಿ ಸೋತಿದ್ದರು. ಎಲ್ಲ ಸಂದರ್ಭದಲ್ಲಿ ಶಕ್ತಿ ಮೀರಿ ಪ್ರಾಮಾಣಿಕ ಸೇವೆ ಮಾಡಿದ್ದಾರೆ. ಈ ಬಾರಿ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.ಮಂಡ್ಯದಲ್ಲಿ 16 ಮಂದಿ ಟಿಕೆಟ್ ಗೆ ಅರ್ಜಿ ಹಾಕಿದ್ದರು. ಡಾ.ಕೃಷ್ಣ ಪಕ್ಷೇತರವಾಗಿ ಅರ್ಜಿ ಹಾಕಿದ್ದಾರೆ. ಟಿಕೆಟ್ ಸಿಗದಿದ್ದಕ್ಕೆ ನೋವು ಆಗುತ್ತದೆ. ಆದರೆ ಎಲ್ಲರನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವುದು ಇಲ್ಲಿನ ಅಭ್ಯರ್ಥಿ ಮೇಲೆ ನಿಂತಿದೆ ಎಂದರು.
ಮೈಸೂರು ಹೆದ್ದಾರಿಯಿಂದ ಇಲ್ಲಿನ ವ್ಯಾಪಾರ ವಹಿವಾಟಿಗೆ ಪೆಟ್ಟು ಬಿತ್ತು. ಈ ಬಗ್ಗೆ ಯಾರೂ ಧ್ವನಿ ಎತ್ತಲಿಲ್ಲ. ರಸ್ತೆ ವಿಚಾರದಲ್ಲಿ ಸದನದಲ್ಲಿ ಯಾರಾದರೂ ಮಾತನಾಡಿದ್ರಾ?. ಅಮಿತ್ ಶಾ ಮಂಡ್ಯದಲ್ಲಿ ಅಮುಲ್ ಜೊತೆಗೆ ನಂದಿನಿ ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳುತ್ತಾರೆ. ಅದು ಹೇಗೆ ತೆಗೆದುಕೊಂಡು ಹೋಗ್ತೀರಿ ಎಂದು ಡಿಕೆಶಿ ಹೇಳಿದರು.
ಮೇ 10 ಪ್ರಜಾಪ್ರಭುತ್ವದ ಹಬ್ಬ. ರಾಜ್ಯವನ್ನು ಬದಲಾವಣೆ ಮಾಡುವ ದಿನ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಕಾರ್ಡ್ ಪಡೆಯಲು ಅವಕಾಶವಿರುವ ದಿನ. ಈ ರಾಜ್ಯದಲ್ಲಿ ಬಿಜೆಪಿ ಆಡಳಿತ ಹೋಗಬೇಕು. ಜಗದೀಶ್ ಶೆಟ್ಟರ್, ಸವದಿ ಮುಂತಾದವರು ಕಾಂಗ್ರೆಸ್ ಗೆ ಬಂದಿದ್ದಾರೆ. ಇನ್ನು ಕೆಲವರು ಬರುತ್ತಿದ್ದು ನಾವೇ ಬೇಡ ಎಂದಿದ್ದೇವೆ. ಬಿಜೆಪಿಯವರು ಐಟಿ, ಇಡಿ ದಾಳಿ ನಡೆಸುವ ಮೂಲಕ ನನ್ನ ಒಳಗೆ ಜೈಲಿಗೆ ಹಾಕಲು ಪ್ರಯತ್ನ ಪಟ್ಟರು. ರಾಹುಲ್ ಗಾಂಧಿ ಅವರನ್ನೇ ಬಿಡಲಿಲ್ಲ. ಇನ್ನು ನನ್ನನ್ನು ಬಿಡ್ತಾರಾ ?. ಬಿಜೆಪಿಯವರು ಏನೇ ಮಾಡಿದರೂ ನಾನಂತೂ ಶರಣಾಗತಿ ಆಗಲ್ಲ ಎಂದರು.