ಮೈಸೂರು:''ದೇಶದ ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಲು ದೆಹಲಿಯಲ್ಲಿ ಫೆ.13 ರಂದು ದೇಶದ ಎಲ್ಲ ರೈತ ಸಂಘಟನೆಗಳ ಮಹಾಸಂಗಮ ರ‍್ಯಾಲಿ ನಡೆಯಲಿದೆ'' ಎಂದು ದಕ್ಷಿಣ ಭಾರತ ಸಂಯುಕ್ತ ಕಿಸಾನ್ ಮೋರ್ಚಾ ಸಂಚಾಲಕ, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಹೇಳಿದರು.
ಜಲದರ್ಶಿನಿ ಅತಿಥಿಗೃಹದಲ್ಲಿ ಇಂದು (ಗುರುವಾರ) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಈಗಾಗಲೇ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ದೇಶದ ವಿವಿಧ ರಾಜ್ಯಗಳಲ್ಲಿ 14 ಕಿಸಾನ್ ಮಹಾ ಪಂಚಾಯತ್ ಸಮಾವೇಶಗಳ ನಡೆಸಿ ರೈತರಲ್ಲಿ ಜಾಗೃತಿ ಮೂಡಿಸಲಾಗಿದೆ. ದೇಶದ ರೈತರನ್ನು ರಕ್ಷಣೆ ಮಾಡಲು ಕೇಂದ್ರ ಸರಕಾರ ವಿಶ್ವ ವ್ಯಾಪಾರ ಒಪ್ಪಂದದಿಂದ ಹೊರಗೆ ಬರಬೇಕು. ಕಬ್ಬಿನ ಎಫ್ಆರ್ಪಿ ದರವನ್ನು ಕನಿಷ್ಠ 4000 ರೂಪಾಯಿಗೆ ಏರಿಕೆ ಮಾಡಬೇಕು. 60 ವರ್ಷ ತುಂಬಿದ ರೈತರಿಗೆ ಕನಿಷ್ಠ 10,000 ರೂ. ಪಿಂಚಣಿ ನೀಡುವ ಯೋಜನೆ ಜಾರಿಗೆ ತರಬೇಕು. ಬೆಳೆ ವಿಮೆ ಪದ್ಧತಿ ಬದಲಾಯಿಸಬೇಕು. ಎಲ್ಲ ಬೆಳೆಗಳಿಗೂ ಬೆಳೆ ವಿಮೆ ಜಾರಿ ಆಗಬೇಕು ಎಂದು ಒತ್ತಾಯಿಸಲಾಗುವುದು'' ಎಂದರು.
''ಮುಖ್ಯಮಂತ್ರಿಯವರ ಕ್ಷೇತ್ರದಲ್ಲಿರುವ ಬಣ್ಣಾರಿ ಸಕ್ಕರೆ ಕಾರ್ಖಾನೆ ರಹದಾರಿ ನಿಯಮಗಳನ್ನು ಉಲ್ಲಂಘಿಸಿ, ಸರ್ಕಾರಕ್ಕೆ ಹಾಗೂ ರೈತರಿಗೆ ಹಲವಾರು ವಿಧದಲ್ಲಿ ಸುಳ್ಳು ಮಾಹಿತಿ ವರದಿ ಸಲ್ಲಿಸಿ ವಂಚನೆ ಮಾಡುತ್ತಿದೆ. ರಾಜ್ಯ ಸರ್ಕಾರ ಕೂಡಲೇ ದಕ್ಷ ಅಧಿಕಾರಿಗಳ ತಂಡ ರಚಿಸಿ, ತನಿಖೆ ನಡೆಸಿ ಸಕ್ಕರೆ ಕಾರ್ಖಾನೆಯನ್ನು ರಾಜ್ಯ ಸರಕಾರ ವಶಕ್ಕೆ ಪಡೆದು ರೈತರಿಗೆ ನ್ಯಾಯ ಕೊಡಿಸಬೇಕು'' ಎಂದು ಆಗ್ರಹಿಸಿದರು.