ಮಂಡ್ಯ: ಇಂದು ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆಯಿತು. ಪ್ರತಿಷ್ಠೆಯ ಕಣ ಸಕ್ಕರೆ ಜಿಲ್ಲೆಯಲ್ಲಿ ಅತ್ಯಧಿಕ ಮತದಾನ ಆಗಿದೆ. ಈ ವೇಳೆ ಕೆಲವೊಂದು ಅಹಿತಕರ ಘಟನೆಗಳು ಜರುಗಿದ್ದು ಬಿಟ್ಟರೆ ಬಹುತೇಕ ಶಾಂತಿಯುತ ಮತದಾನವಾಗಿದೆ. ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ...
ಸುಮಲತಾ ಮತ್ತು ನಿಖಿಲ್ ಅಭಿಮಾನಿಗಳ ನಡುವೆ ಗಲಾಟೆ:
ಮದ್ದೂರು ತಾಲೂಕಿನ ದೊಡ್ಡ ಅರಸಿನಕೆರೆಯಲ್ಲಿ ಅಂಬಿ ಅಭಿಮಾನಿಗಳು ಹಾಗೂ ನಿಖಿಲ್ ಅಭಿಮಾನಿಗಳ ನಡುವೆ ಗಲಾಟೆ ನಡೆಯಿತು. ನಿಖಿಲ್ ಕುಮಾರಸ್ವಾಮಿ ಎದುರೇ ಗಲಾಟೆ ನಡೆದಿದ್ದು, ಸುಮಲತಾ ಬೆಂಬಲಿಗರ ಮೇಲೆ ಹಲ್ಲೆ ನಡೆದು ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತವಾಗಿಸಿದರು.
ಮತದಾನ ಮಾಡಿದ ಅಯ್ಯಪ್ಪ ಮಾಲಾಧಾರಿಗಳು:
ಇನ್ನು ಮಳವಳ್ಳಿ ತಾಲೂಕಿನ ಚಿಕ್ಕ ಮುಲಗೂಡು ಗ್ರಾಮದಲ್ಲಿ ಅಯ್ಯಪ್ಪ ಮಾಲಾಧಾರಿಗಳು ಮೊದಲು ಮತ ಚಲಾವಣೆ ಮಾಡಿ ಶಬರಿಮಲೆಯತ್ತ ಹೊರಟಿದ್ದು, ವಿಶೇಷವಾಗಿತ್ತು. ಇವರಲ್ಲಿ 60 ಮಂದಿ ಮಾಲಾಧಾರಿಗಳು ಮತದಾನದಲ್ಲಿ ಪಾಲ್ಗೊಂಡಿದ್ದರು.
ಮತದಾನ ಮಾಡಿದ ಪ್ರಮುಖರೆಂದರೆ:
ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್, ಸಚಿವರಾದ ಡಿ.ಸಿ. ತಮ್ಮಣ್ಣ, ಸಿ.ಎಸ್. ಪುಟ್ಟರಾಜು, ಸಾ.ರಾ. ಮಹೇಶ್, ಮಾಜಿ ಸಚಿವರಾದ ಚೆಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ಸಂಸದ ಶಿವರಾಮೇಗೌಡ ಮತ್ತು ಐವರು ಶಾಸಕರು, ಇಬ್ಬರು ಪರಿಷತ್ ಸದಸ್ಯರು ಮಂಡ್ಯದಲ್ಲಿ ಹಕ್ಕನ್ನು ಚಲಾಯಿಸಿದರು.